ಕೂಡಿಗೆ, ಜ. ೧೨: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಶಾಲಾ ವಿದ್ಯಾರ್ಥಿಗಳು, ಸೇರಿದಂತೆ ಸಾರ್ವಜನಿಕರ ಸಹಕಾರದೊಂದಿಗೆ ಜಾಥಾ ನಡೆಯಿತು. ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೂಡಿಗೆ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಜಾಥಾದ ವೇಳೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಿದ್ಯಾರ್ಥಿಗಳು ಘೋಷಣೆಗಳು ಹಾಗೂ ನಾಮಫಲಕಗಳ ಮೂಲಕ ಸಾರ್ವಜನಿಕರಿಗೆ ಸಂದೇಶ ನೀಡಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ರಸ್ತೆ ಅಪಘಾತಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಚಾರಿ ನಿಯಮಗಳ ಪಾಲನೆ ಅತ್ಯಂತ ಅಗತ್ಯವಾಗಿದ್ದು, ಹೆಲ್ಮೆಟ್, ಸೀಟ್‌ಬೆಲ್ಟ್ ಬಳಕೆ, ಅತಿವೇಗ ನಿಯಂತ್ರಣ ಸೇರಿದಂತೆ ನಿಯಮಗಳ ಪಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಜೊತೆಗೆ ರಾಜ್ಯ ಹೆದ್ದಾರಿಗಳಲ್ಲಿ ಈಗಾಗಲೇ ಇಲಾಖೆ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಆಧುನಿಕ ತಂತ್ರಜ್ಞಾನದ ಸಿ.ಸಿ. ಟಿವಿಯನ್ನು ಅಳವಡಿಕೆ ಮಾಡಲಾಗಿದೆ. ನಿಯಮಗಳನ್ನು ಪಾಲನೆ ಮಾಡದೆ ಚಾಲನೆ ಮಾಡಿದರೆ ಸವಾರರಿಗೆ ಮನೆಗೆ ದಂಡವನ್ನು ಪಾವತಿಸುವಂತೆ ನೋಟೀಸ್ ಬರುತ್ತದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ನಿಯಮಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಎ.ಎಸ್.ಐ. ಸೇರಿದಂತೆ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.