ಚೆಯ್ಯಂಡಾಣೆ, ಜ. ೧೨: ಜೀವನದಲ್ಲಿ ಶಿಸ್ತು ಇದ್ದರೆ ಮಾತ್ರ ಸಮಾಜದಲ್ಲಿ ಉನ್ನತಮಟ್ಟಕ್ಕೆರಲು ಸಾಧ್ಯ ಎಂದು ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹೆಚ್.ಆರ್. ಪ್ರೇಮಾಕುಮಾರಿ ಅಭಿಪ್ರಾಯಪಟ್ಟರು.
ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಗೊಂಡ ಮತ್ತೋರ್ವ ದೈಹಿಕ ಶಿಕ್ಷಣ ಶಿಕ್ಷಕ ಪೂರ್ಣೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರತ್ನಾ ವಹಿಸಿದ್ದರು. ಅತಿಥಿ ಶಿಕ್ಷಕಿ ಸತ್ಯಮ್ಮ, ಶಿಕ್ಷಕಿ ಜಯಪ್ರದ ಮಾತನಾಡಿದರು. ಶಾಲಾ ಎಸ್‌ಡಿಎಂಸಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ನಿವೃತ್ತಿ ಹೊಂದಿದ ಶಿಕ್ಷಕರಿಗೆ ಕಿರು ಕಾಣಿಕೆ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಇದೇ ಸಂದರ್ಭ ಶಾಲೆಯಲ್ಲಿ ಸೇವೆ ಸಲ್ಲಿಸಿದ ನೆನಪಿಗಾಗಿ ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಶಾಲೆಗೆ ಹಾಟ್ ಬಾಕ್ಸ್ ಕೊಡುಗೆಯಾಗಿ ನೀಡಿದ್ದಾರೆ.
ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ವಿಮಲಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಲಲಿತಾ, ಪ್ರೇಮಾ ಕುಮಾರಿಯವರ ಪತಿ ನಿವೃತ್ತ ಶಿಕ್ಷಕರಾದ ರಾಜು, ಹರೀಶ್, ಚೆಯ್ಯಂಡಾಣೆ ಆರೋಗ್ಯ ಕೇಂದ್ರದ ಕನಕಾವತಿ, ಶಿಕ್ಷಕಿ ಜಯಮಾಲ, ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಬಾರ ಮುಖ್ಯ ಶಿಕ್ಷಕಿ ವಿಮಲಾ ಸ್ವಾಗತಿಸಿ, ಜಯಪ್ರದ ನಿರೂಪಿಸಿ, ಜಯಮಾಲ ವಂದಿಸಿದರು.