ವೀರಾಜಪೇಟೆ, ಜ. ೧೩: ಟ್ಯಾಕ್ಸಿ ಚಾಲಕರೊಬ್ಬರು ವೀರಾಜಪೇಟೆ ಅರಮೇರಿ ಗ್ರಾಮದ ನಾಲ್ಕನೇ ಮೈಲಿಯ ತಮ್ಮ ಗದ್ದೆಯಲ್ಲಿ ಸ್ವಂತ ಒಂಟಿನಳಿಕೆ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗಿನ ಜಾವ ಸುಮಾರು ಎರಡೂವರೆ ಗಂಟೆಗೆ ಡಾಲು ನಂಜಪ್ಪ (೬೨) ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿರಿಯಕಂಡ ಪೊನ್ನಪ್ಪ ಅವರ ಪುತ್ರ ಡಾಲು ನಂಜಪ್ಪ ಅವರಿಗೆ ಸೋಮವಾರ ಆರೋಗ್ಯ ಸಮಸ್ಯೆ ಎದುರಾಗಿದ್ದು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಮನೆಗೆ ಮರಳಿದ್ದು, ತಮ್ಮ ಆರೋಗ್ಯ ಸಮಸ್ಯೆಯಿಂದ ಮನನೊಂದು ಡಾಲು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಪಕ್ಕದ ತೋಟಕ್ಕೆ ಕಾಫಿ ಕುಯ್ಯಲು ತೆರಳಿದ್ದ ವ್ಯಕ್ತಿಗಳು ಗದ್ದೆಯಲ್ಲಿ ಕೋವಿ ಸಹಿತ ಡಾಲು ಅವರು ಬಿದ್ದಿರುವುದನ್ನು ಗಮನಿಸಿ ವೀರಾಜಪೇಟೆ ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆ ಅಧಿಕಾರಿ ಲತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೀರಾಜಪೇಟೆ ಡಿ.ವೈ.ಎಸ್ಪಿ ಮಹೇಶ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬ ಸದಸ್ಯರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು. ಘಟನೆಗೆ ಸಂಬAಧಿಸಿದAತೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.