ಮಡಿಕೇರಿ, ಜ. ೧೩: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ. ೧೫ ರಂದು ಭಾಗಮಂಡಲದಲ್ಲಿ ಲೋಕ ಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮುದ್ದಂಡ ದೇವಯ್ಯ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿರುವ ಟ್ರಸ್ಟ್ನ ಜಾಗದಲ್ಲಿ ಬೆಳಿಗ್ಗಿನಿಂದ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಚಂಡಿಕಾ ಹೋಮ ಹಾಗೂ ಶತ ರುದ್ರಾಭಿಷೇಕ ಪಠಣ ಸೇರಿದಂತೆ ಇನ್ನಿತರ ದೈವಿಕ ಕಾರ್ಯಕ್ರಮ ಸುಬ್ರಹ್ಮಣ್ಯ ತಂತ್ರಿಗಳಾದ ಬೆಳ್ಳುಕರಾಯ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕೊಡವ ಹಾಗೂ ಅಮ್ಮ ಕೊಡವ ಸಮುದಾಯಗಳಿಗೆ ಸಮಸ್ಯೆ ಇರುವುದು ತಿಳಿದು ಬಂದ ನಂತರ ಟ್ರಸ್ಟ್ ಮೂಲಕ ಹಲವು ಯಜ್ಞ-ಯಾಗಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನಿರಂತರವಾಗಿ ಧಾರ್ಮಿಕ ಕಾರ್ಯ ಮುಂದುವರೆಸಿಕೊAಡು ಬಂದ ಪರಿಣಾಮ ಸಮಸ್ಯೆಗಳು ಬಹುತೇಕ ಪರಿಹಾರವಾಗಿರುವುದು ಅಷ್ಟಮಂಗಲ ಪ್ರಶ್ನೆಯಿಂದಲೇ ತಿಳಿದು ಬರುತ್ತಿದೆ ಎಂದರು.

ಟ್ರಸ್ಟ್ನ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಶೀಘ್ರ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಸರಕಾರವೂ ರೂ. ೧ ಕೋಟಿ ಹಣವನ್ನು ನೀಡಿದೆ ಎಂದು ಹೇಳಿದರು.

ಉಪಾಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಕಾವೇರಿ ಮಾತೆಯ ಅನುಗ್ರಹದಿಂದ ಟ್ರಸ್ಟ್ ಹೆಸರಿನಲ್ಲಿ ಜಾಗ ಖರೀದಿ ಮಾಡುವ ಶಕ್ತಿ ಬಂತು. ಅಲ್ಲದೆ ಅನಿರೀಕ್ಷಿತವಾಗಿ ಸರಕಾರವೂ ಅನುದಾನ ನೀಡಿತು. ಲೋಕ ಕಲ್ಯಾಣದ ಉದ್ದೇಶಕ್ಕಾಗಿ ನಡೆಯುತ್ತಿರುವ ಧಾರ್ಮಿಕ ಕೈಂಕರ್ಯದಲ್ಲಿ ಹಿಂದೂ ಬಾಂಧವರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಟ್ರಸ್ಟಿಗಳಾದ ತೋಲಂಡ ಸೋಮಯ್ಯ, ನೆರೆಯಂಡಮ್ಮAಡ ಪ್ರಭು, ಹಂಚೆಟ್ಟಿರ ಮುನು ಮುದ್ದಪ್ಪ ಹಾಜರಿದ್ದರು.