*ಗೋಣಿಕೊಪ್ಪ, ಜ. ೧೬: ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಂಟು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲಿಕೆಗಳನ್ನು ಪ್ರದರ್ಶಸಿ, ಬಹುಮಾನ ಪಡೆದುಕೊಂಡರು. ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ನಡೆದ ಕಲಿಕಾ ಹಬ್ಬವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರಮೋದ್ ಗಣಪತಿ, ಮಕ್ಕಳ ಮುಕ್ತ ಕಲಿಕೆಯ ವಾತಾವರಣಕ್ಕೆ ಅನುಕೂಲಕರವಾಗಿ ಕಲಿಕಾ ಹಬ್ಬವನ್ನು ಸರಕಾರ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಮಕ್ಕಳೆಡೆಗೆ ತಲುಪಿಸುವ ವ್ಯವಸ್ಥೆಯನ್ನು ಸಂಭ್ರಮವಾಗಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಕಾರ್ಯಕ್ರಮ ಆಯೋಜನೆಯಾಗಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕುವ ಸಲುವಾಗಿ ಕಲಿಕಾ ಹಬ್ಬ ಆಚರಣೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಅಗಾಧ ಪ್ರತಿಭೆಗಳು ಈ ಕಾರಣ ಹೊರ ಬಂದು ಗುರುತಿಸಿಕೊಳ್ಳುವ ವೇದಿಕೆ ಯಾಗುತ್ತಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮಾತ ನಾಡಿ, ಮಕ್ಕಳಲ್ಲಿ ಕಲಿಯುವ ಗುಣಗಳನ್ನು ಹೆಚ್ಚಿಸುವ ಪ್ರಯೋಗಾತ್ಮಕ ಕಾರ್ಯಕ್ರಮಗಳು ಸರ್ಕಾರದ ಚಿಂತನೆಯ ಯೋಜನೆಗಳಾಗಿವೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಕಲಿಕಾ ಹಬ್ಬಗಳ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಪ್ರೆರೇಪಿಸುತ್ತದೆ. ಜೊತೆಗೆ ಮಕ್ಕಳಲ್ಲಿರುವ ಆಸಕ್ತಿ ಗ್ರಹಿಕೆಯ ಶಕ್ತಿ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಗ್ರಾಪಂ ಸದಸ್ಯೆ ಕೊಣಿಯಂಡ ಬೋಜಮ್ಮ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸತೀಶ್ ಬಿ.ಆರ್. ಸೇರಿದಂತೆ ಶಾಲೆಯ ಎಸ್‌ಡಿಎಂಸಿ ಸಮಿತಿ ಉಪಾಧ್ಯಕ್ಷೆ ದಿವ್ಯ ಹಾಜರಿದ್ದರು.