ಸಿದ್ದಾಪುರ, ಜ. ೧೬: ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಚೆನ್ನಯ್ಯನಕೋಟೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಹತ್ತಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ಮತ್ತು ಆನೆ ಕಾರ್ಯಪಡೆಯ ತಂಡದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಮರಿಯಾನೆಗಳೊಂದಿಗೆ ಇದ್ದ ಕಾಡಾನೆಗಳು ಕಾಫಿ ತೋಟವನ್ನು ಬಿಟ್ಟು ಕಾಡಿನತ್ತ ತೆರಳಲು ಹಿಂದೇಟು ಹಾಕಿದವು. ಆದರೂ ಶ್ರಮವಹಿಸಿ ಕಾರ್ಯಾಚರಣೆ ತಂಡವು ಕಾಡಾನೆಗಳನ್ನು ದೇವಮ್ಮಚ್ಚಿ ಅರಣ್ಯಕ್ಕೆ ಅಟ್ಟಲಾಯಿತು.
ಬೋನ್ನತ್ತ ಸುಳಿಯದ ಹುಲಿ!
ಕಳೆದ ಒಂದು ವಾರಗಳ ಹಿಂದೆ ಎರಡು ದಿನಗಳ ಅಂತರದಲ್ಲಿ ಎರಡು ಹಸುಗಳ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿತ್ತು. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಫಿ ತೋಟದೊಳಗೆ ಬೋನ್ ಇರಿಸಲಾಗಿದೆ. ಅದರೊಳಗೆ ಹಸುವಿನ ಕಳೇಬರವನ್ನು ಇಡಲಾಗಿದ್ದು, ಒಂದು ವಾರ ಕಳೆದರೂ ಹುಲಿಯ ಚಲನವಲನ ಕಂಡುಬರುತ್ತಿಲ್ಲ. ಇದಕ್ಕಾಗಿ ೫ ಕ್ಯಾಮರಗಳನ್ನು ಅಳವಡಿಸಲಾಗಿದೆ. ಅದರಲ್ಲೂ ಕೂಡ ಚಲನವಲನ ಪತ್ತೆಯಾಗಿಲ್ಲ.
ವಾಸು