ಮಡಿಕೇರಿ, ಜ. ೧೭: ಜಮ್ಮಾ ಬಾಣೆ ವಿಚಾರದಲ್ಲಿ ಉಚ್ಚ ನ್ಯಾಯಾಲಯ ೨೦೨೪ರಲ್ಲಿ ನೀಡಿರುವ ಆದೇಶವನ್ನು ಜಿಲ್ಲಾಡಳಿತ ಪಾಲಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ ಬಿಜೆಪಿ ಪ್ರಮುಖರು, ತಪ್ಪಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರನ್ನು ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಬಿಜೆಪಿ ಪ್ರಮುಖರು ಜಿಲ್ಲಾಡಳಿತದ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾಗಿ ೨೦೨೪ರಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ಆದೇಶ ಪ್ರತಿಯನ್ನು ಸಲ್ಲಿಸಿ ವಿಷಯವನ್ನು ಗಮನಕ್ಕೆ ತಂದರು.
ಆದೇಶದ ಪ್ರತಿ ದೊರೆತ ೩೦ ದಿನದೊಳಗೆ ತೀರ್ಪಿನಲ್ಲಿ ಇರುವ ಅಂಶವನ್ನು ಕಾರ್ಯಗತಗೊಳಿಸುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದರು. ಆದರೆ, ಇದುವರೆಗೂ ಅನುಷ್ಠಾನವಾಗಿಲ್ಲ. ಇದು ನ್ಯಾಯಾಂಗ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ಪ್ರಮುಖರು, ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಹೂಡಿ ಕಾನೂನಾತ್ಮಕವಾಗಿ ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.
ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ದಿನದಿಂದ ದಿನಕ್ಕೆ ಜಮ್ಮಾ ಬಾಣೆ ಸಮಸ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಕಂದಾಯ ಕಾರ್ಯದರ್ಶಿಯೊಬ್ಬರು ಹೊರಡಿಸಿದ್ದ ಸುತ್ತೋಲೆ ವಿರೋಧಿಸಿ ಜನತೆಯನ್ನು ಒಳಗೊಂಡ ಕೊಡಗು ಅಸ್ತಿತ್ವ ಸಮಿತಿ ರಚಿಸಿ ಹೋರಾಟ ನಡೆಸಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭ ಈ ಸುತ್ತೋಲೆ ಹಿಂಪಡೆಯಲಾಗಿತ್ತು. ಪ್ರಮುಖರಾದ ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ, ಅರುಣ್ ಮಾಚಯ್ಯ ಸೇರಿದಂತೆ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು, ಸಮಾಜದ ಪ್ರಮುಖರ ಸಭೆ ನಡೆಸಿ ಸರಕಾರದ ಗಮನ ಸೆಳೆದ ಪರಿಣಾಮ ಕರ್ನಾಟಕ ಭೂ ಕಂದಾಯ ಸೆಕ್ಷನ್ ೨ ಮತ್ತು ೨೦ಕ್ಕೆ ತಿದ್ದುಪಡಿ ತಂದು ಜಮ್ಮಾಬಾಣೆಗೆ ಒಡೆತನ ನೀಡಲು ಮುಂದಾಗಿ ಕಂದಾಯಕ್ಕೆ ಒಳಪಡಿಸಲು ನಿರ್ಧರಿಸಲಾಯಿತು. ಈ ಸಂದರ್ಭ ರಾಜ್ಯಪಾಲರು ಈ ಮಸೂದೆಗೆ ಒಪ್ಪಿಗೆ ನಿರಾಕರಿಸಿದಾಗ ರಾಷ್ಟçಪತಿ ಬಳಿ ಮಸೂದೆ ಹೋಗಿ ನಂತರ ಅವರಿಂದ ಅಂಗೀಕಾರವಾಯಿತು. ಬಳಿಕ ಇದನ್ನು ಪ್ರಶ್ನಿಸಿ ಬಹುತೇಕ ಕಾಂಗ್ರೆಸ್ಸಿಗರು ಹಾಗೂ ಮಾಜಿ ಸೇನಾಧಿಕಾರಿಯೊಬ್ಬರು ಸೇರಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಿಸಿದ ನ್ಯಾಯಾಧೀಶರು ಅರ್ಜಿಯನ್ನು ವಜಾ ಮಾಡಿ ಸರಕಾರದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ತಿದ್ದುಪಡಿಯನ್ನು ಎತ್ತಿಹಿಡಿದು ಹಿಡುವಳಿದಾರರಿಗೆ ಮಾಲೀಕತ್ವ ನೀಡಬೇಕು ಹಾಗೂ ಜಾಗಕ್ಕೆ ಕಂದಾಯ ನಿಗದಿ ಮಾಡುವಂತೆ ಆದೇಶಿಸಿದ್ದರು. ಆದರೆ, ಇದು ಇಂದಿಗೂ ಕಾರ್ಯಗತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜಮ್ಮಾ ಸಮಸ್ಯೆ ಶೇ ೯೫ ಭಾಗ ನಾವು ಪರಿಹಾರ ಮಾಡಿದ್ದೇವೆ. ಜಾಗದಲ್ಲಿರುವ ಮರಗಳು ಕೂಡ ಹಿಡುವಳಿದಾರರಿಗೆ ಸೇರಿದ್ದು ಎಂಬ ಅಂಶ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿದೆ. ನ್ಯಾಯಾಲಯದಲ್ಲಿ ರಿಟ್ ಅರ್ಜಿ ವಿಚಾರಣೆಯಲ್ಲಿದ್ದ ಹಿನ್ನೆಲೆ ನಮ್ಮ ಅವಧಿಯಲ್ಲಿ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿರಲಿಲ್ಲ. ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವೂ ಇಷ್ಟು ಸಮಯ ಮೌನವಾಗಿತ್ತು. ಮುಂದೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಮ್ಮಾ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಹೋರಾಟಗಳು ನಡೆದಿವೆ. ಈ ವಿಚಾರದಲ್ಲಿ ಏನೂ ಕೆಲಸವಾಗಿಲ್ಲ ಎಂದು ಆರೋಪಿಸುವುದು ಸರಿಯಲ್ಲ. ನ್ಯಾಯಾಲಯದ ಆದೇಶ ಪಾಲನೆಯಾಗಬೇಕು. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಮನು ಮಂಜುನಾಥ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ, ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಖಜಾಂಚಿ ಮಲ್ಲಂಡ ಮಧು ದೇವಯ್ಯ, ವಕೀಲ ಕವೀಂದ್ರ, ಬಿಜೆಪಿ ಪ್ರಮುಖರಾದ ರಾಬಿನ್ ದೇವಯ್ಯ, ಅರುಣ್ ಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.