ಮಡಿಕೇರಿ, ಜ. ೧೭: ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ಇರುವ ಮತ್ತು ನಿವೃತ್ತಿ ಹೊಂದಿರುವ ಯೋಧರ ಸಂಖ್ಯೆ ಸುಮಾರು ೫ ಸಾವಿರದಷ್ಟಿದ್ದು, ಇದುವರೆಗೂ ಯೋಧರ ಹಿತರಕ್ಷಣೆಗಾಗಿ ಜಾಗವನ್ನು ಕೂಡ ಹೊಂದಲು ಸಾಧ್ಯವಾಗಿಲ್ಲ. ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದೇವೆ. ಈಗಾಗಲೇ ಮೃತ ಯೋಧರ ಪತ್ನಿಯರು ಹಾಗೂ ಕುಟುಂಬ ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಆ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ. ಕುಶಾಲನಗರದ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆ ಯಲ್ಲಿ ಈಗಾಗಲೇ ೬೦ ಸೆಂಟ್ ಸರ್ಕಾರಿ ಜಾಗವನ್ನು ಗುರುತಿಸಿದ್ದು ಈಗಾಗಲೇ ಮಾಹಿತಿ ನೀಡಲಾಗಿದೆ. ಆದ್ದರಿಂದ ಕುಶಾಲನಗರಕ್ಕೆ ಆಗಮಿಸಿ ಖುದ್ದಾಗಿ ಸ್ಥಳ ಪರಿಶೀಲಿಸಿ ನಮಗೆ ಆ ಭೂಮಿಯನ್ನು ಮಂಜೂರಾತಿ ಮಾಡಿಕೊಡ ಬೇಕೆಂದು ಸಂಘದ ವತಿಯಿಂದ ಕೋರಲಾಯಿತು. ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಪುಲಿಯಂಡ ಎಂ. ಚಂಗಪ್ಪ, ನಿರ್ದೇಶಕರಾದ ಹರೀಶ್ ಕುಮಾರ್, ಜಿ.ಕೆ. ದಿನೇಶ್ ಕುಮಾರ್, ಬಿ.ಯು.ಲೋಕೇಶ್, ಎನ್.ಎಂ. ಭೀಮಯ್ಯ ಮತ್ತು ಡಿ.ಎಸ್. ನಳಿನಿ ಕುಮಾರಿ ಇದ್ದರು.