ಕಣಿವೆ, ಜ. ೧೭: ಕುಶಾಲನಗರ ಪಟ್ಟಣವೂ ಸೇರಿದಂತೆ ಕೊಡಗಿನ ಹೇಟೆಲ್ ಉದ್ಯಮದಲ್ಲಿ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ. ಭಾಸ್ಕರ್ ಅಗಲಿಕೆ ಕೊಡಗಿನ ಹೊಟೇಲ್ ಉದ್ಯಮಕ್ಕೆ ನಷ್ಟ ಎಂದು ಹೊಟೇಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಜಿ.ಕೆ. ಶೆಟ್ಟಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಹೊಟೇಲ್ ಅಸೋಸಿಯೇಷನ್ ಹಾಗೂ ಕುಶಾಲನಗರದ ವಿವಿಧ ಸಂಘಟನೆಗಳ ವತಿಯಿಂದ ನಗರದ ಮೈಸೂರು ರಸ್ತೆಯ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿ ನಮನದಲ್ಲಿ ಪಾಲ್ಗೊಂಡು ಕೆ.ಕೆ.ಭಾಸ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೊಡಗಿಗೆ ಯಾವುದೇ ಅಪರಿಚಿತ ಪ್ರವಾಸಿಗರು ಅತಿಥಿ ಹೊಟೇಲ್ಗೆ ಆಗಮಿಸಿದಾಗ ಅವರಲ್ಲಿ ಪರಿಚಿತರ ಭಾವ ಮೂಡಿಸುತ್ತಿದ್ದ ಭಾಸ್ಕರ್, ಅತ್ಯುತ್ತಮ ಆತಿಥ್ಯ ನೀಡಿ ಸತ್ಕರಿಸುತ್ತಿದ್ದರು. ಹಾಗಾಗಿಯೇ ಅವರು ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಶ್ಲಾಘಿಸಿದರು.
ಕೊಡಗು ಜಿಲ್ಲಾ ಘಟಕದ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ, ಭಾಸ್ಕರ್ ಅವರ ಅಕಾಲಿಕ ಅಗಲಿಕೆ ಹೊಟೇಲ್ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಾಸ್ಕರ್ ಅವರು ಯಶಸ್ವಿ ಉದ್ಯಮಿಯಾಗಿದ್ದರು. ಮೂಲ ಮಲೆಯಾಳಿಗರಾದರೂ ಕೂಡ ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇತ್ತು. ತಾವು ವಹಿಸಿಕೊಂಡ ಯಾವುದೇ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು ಎಂದು ಶ್ಲಾಘಿಸಿದರು.
ಕೊಡಗು ಜಿಲ್ಲಾ ವಾಣಿಜ್ಯೊದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಭಾಸ್ಕರ್ ಅವರು ಕುಶಾಲನಗರದ ಹೊಟೇಲ್ ಉದ್ಯಮದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗೆ ರಾಜ್ಯ ಪ್ರಶಸ್ತಿ ದೊರಕಿದ ಬಗ್ಗೆ ವಿವರಿಸಿದರು. ಕುಶಾಲನಗರದ ಸಾಮಾಜಿಕ ಚಿಂತಕ ವಿ.ಪಿ. ಶಶಿಧರ್ ಮಾತಾನಾಡಿ, ಕುಶಾಲನಗರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಭಾಸ್ಕರ್ ಅವರ ಸೇವೆ ಹಾಗೂ ಕಾಳಜಿ ಪ್ರಮುಖ ಕಾರಣವಾಗಿತ್ತು. ಯಾರೇ ಹೋಟೆಲ್ಗೆ ಬಂದರೂ ಕೂಡ ಅತ್ಯಂತ ಆಪ್ತತೆಯಿಂದ ಸೇವೆ ನೀಡುತ್ತಿದ್ದರು ಎಂದು ಶಶಿಧರ್ ವರ್ಣಿಸಿದರು. ರಾಜ್ಯ ಹೊಟೇಲ್ ಅಸೋಸಿಯೇಷನ್ ಸದಸ್ಯತ್ವ ಕಮಿಟಿ ಚೇರ್ಮನ್ ಶ್ರೀನಿವಾಸ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶೇಖರ ನಾಯ್ಡು, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ, ಕಾವೇರಿ ನದಿ ಸಂರಕ್ಷಣಾ ಕೃಷಿಕ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೇರಳ ಸಮಾಜದ ನಿರ್ದೇಶಕ ಕೆ. ವರದ ಮಾತನಾಡಿದರು.
ಕುಶಾಲನಗರ ಸಮಾನ ಮನಸ್ಕರ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಸ್ವಾಗತಿಸಿ, ವಂದಿಸಿದರು.