ಮಡಿಕೇರಿ, ಜ. ೨೩: ಕೊಡಗಿನ ಜಮ್ಮಾಬಾಣೆ ಸಮಸ್ಯೆಯನ್ನು ಪರಿಹರಿಸುವ ವಿಚಾರದಲ್ಲಿ ಸುಮಾರು ಶೇ.೯೦ ರಷ್ಟು ಪ್ರಯತ್ನ ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ನಡೆದು ಸರಿಪಡಿಸಲಾಗಿದ್ದು, ಇದೀಗ ಕಾಂಗ್ರೆಸ್ ಇದರ ಪ್ರಚಾರ ಪಡೆಯುತ್ತಿದೆ ಎಂಬುದಾಗಿ ಮಾಜಿ ಶಾಸಕರುಗಳಾದ ಕೆ.ಜಿ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಜಿಲ್ಲಾ ಬಿ.ಜೆ.ಪಿ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು, ೧೯೮೧-೮೨ ಇಸವಿಯಲ್ಲಿ ಜಮ್ಮಾ ಜಾಗ ಸರಕಾರದ್ದು ಎಂಬ ಸುತ್ತೋಲೆ ಹೊರಬಂತು. ನಂತರದಲ್ಲಿ ೨೦೦೪, ೨೦೦೫ರಲ್ಲಿಯೂ ಹೊರಬಂದ ಸುತ್ತೋಲೆಗಳಲ್ಲಿ ಇದೇ ರೀತಿ ಆದೇಶ ನೀಡಲಾಗಿತ್ತು. ಇವೆರಡರ ವಿರುದ್ಧ ಅಂದು ಹೋರಾಟ ನಡೆಸಿದ ಫಲ ಇವೆರಡು ಸುತ್ತೋಲೆಗಳನ್ನೂ ಹಿಂಪಡೆಯಲಾಯಿತು.
ನಂತರ ೨೦೦೬ರಲ್ಲಿ ಪುನಃ ಇದೇ ರೀತಿ ಸುತ್ತೋಲೆ ಬಂದಾಗ ರಾಜಕೀಯ ರಹಿತವಾಗಿ ಕೊಡಗು ಅಸ್ತಿತ್ವ ಸಮಿತಿ ಮೂಲಕ ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿತು. ರಾಜ್ಯೋತ್ಸವ ಆಚರಣೆಯನ್ನೂ ಬಹಿಷ್ಕರಿಸಿ ಕೊಡಗು ಬಂದ್ ಮಾಡಿ ಸಮಿತಿ ಸದಸ್ಯರು ಕ್ರಿಮಿನಲ್ ಪ್ರಕರಣಗಳನ್ನೂ ಎದುರಿಸಬೇಕಾಯಿತು. ಅದಾಗ್ಯೂ ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಈ ಸುತ್ತೋಲೆ ಹಿಂಪಡೆಯಲೇ ಇಲ್ಲ. ೨೦೦೮ರಲ್ಲಿ ಬಿ.ಜೆ.ಪಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಪಕ್ಷದ ಪ್ರಣಾಳಿಕೆಯಂತೆ ಸುತ್ತೋಲೆ ಹಿಂಪಡೆಯಲು ಯಶಸ್ವಿಯಾಯಿತು. ೨೦೧೧ರಲ್ಲಿ ಸಿ.ಎಂ ಆಗಿದ್ದ ಸದಾನಂದಗೌಡ ಅವರ ನೇತೃತ್ವದಲ್ಲಿ ಜಮ್ಮಬಾಣೆ ಸಮಸ್ಯೆ ಪರಿಹಾರಕ್ಕೆ ಸುತ್ತೋಲೆ ವಾಪಸ್ಸು ಪಡೆಯಲಾಯಿತು. ಜಮ್ಮಾಬಾಣೆಗೆ ಕಂದಾಯ ವಿಧಿಸಿ ಪೂರ್ಣ ಪ್ರಮಾಣದ ಮಾಲಿಕತ್ವವನ್ನು ನೀಡುವಂತೆ ತಿದ್ದುಪಡಿ ಮಾಡಲಾಯಿತು. ಆದರೆ ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡದಿದ್ದಾಗ ರಾಷ್ಟçಪತಿಗಳಿಂದ ೨೦೧೨ರಲ್ಲಿ ಒಪ್ಪಿಗೆ ದೊರಕಿತು. ೨೦೧೩ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇದನ್ನು ಅನಿಷ್ಠಾನಗೊಳಿಸಲು ವಿಫಲವಾಯಿತು. ಇಷ್ಟೇ ಅಲ್ಲದೆ ಕೆಲ ಕಾಂಗ್ರೆಸ್ ಪ್ರಮುಖರು ಈ ತಿದ್ದುಪಡಿ ವಿರುದ್ಧ ೪ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಸಂಬAಧ ಉಚ್ಛ ನ್ಯಾಯಾಲಯವು ವಿಚಾರಣೆ ನಡೆಸಿ ೨೦೨೪ರಲ್ಲಿ ಈ ರಿಟ್ ಅರ್ಜಿಗಳನ್ನು ವಜಾ ಗೊಳಿಸಿತು. ೨೦೧೨ರಲ್ಲಿ ಕೈಗೊಂಡ ತಿದ್ದುಪಡಿ ಸಂವಿಧಾನಾತ್ಮಕವಾಗಿಯೇ ಇದೆ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿತು ಎಂದು ವಿವರಿಸಿದರು.
ಆದರೆ ಇದೀಗ ಕಾನೂನು ಪಂಡಿತರೆನಿಸಿಕೊAಡಿರುವ ಒಬ್ಬರು, ಈ ತಿದ್ದುಪಡಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಕೆ.ಎಲ್.ಆರ್(ಕರ್ನಾಟಕ ಲ್ಯಾಂಡ್ ರೆವೆನ್ಯೂ) ಆಕ್ಟ್ ೧೨೭ಗೆ ತಾನು ತಿದ್ದುಪಡಿ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ತಿದ್ದುಪಡಿ ಟಿಪ್ಪಣಿಯಲ್ಲಿ ರಿಟ್ ಅರ್ಜಿಯ ನಿರ್ದೇಶನದ ಬಗ್ಗೆ ಯಾವುದೇ ಪ್ರಸ್ತಾಪವೂ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡಿಲ್ಲ ಎಂದು ಬೋಪಯ್ಯ, ವೀರಾಜಪೇಟೆ ಶಾಸಕರ ಹೆಸರು ಪ್ರಸ್ತಾಪಿಸದೆ ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬದ ಪಟ್ಟೆದಾರರನ್ನು ಕಂದಾಯ ಸಚಿವರು ಅರಿವಿಲ್ಲದೇ ಏಜೆಂಟ್ ಎಂಬುದಾಗಿ ಹೇಳಿದ್ದರು. ಕಂದಾಯ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲದಿದ್ದರೂ ಕೊಡಗಿನ ಶಾಸಕರಿಗೆ ಈ ಬಗ್ಗೆ ತಿಳಿದಿತ್ತು. ಪದವನ್ನು ಕಡತದಿಂದ ತೆಗೆಯುವಂತೆ ಶಾಸಕರು ಮನವಿ ಮಾಡಬಹುದಿತ್ತು. ಆದರೆ ಈ ಬಗ್ಗೆ ಶಾಸಕರು ಏನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಕೆ.ಜಿ ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಜಮ್ಮಾಬಾಣೆ ಸಮಸ್ಯೆ ಶೇ.೯೦ ರಷ್ಟು ಬಿ.ಜೆ.ಪಿಯಿಂದಲೇ ಪರಿಹಾರವಾಗಿದೆ. ಕಾಂಗ್ರೆಸ್ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ನಾವು ಜನರ ಸೇವೆಗಾಗಿ, ಜನರ ಸಮಸ್ಯೆ ಬಗೆಹರಿಸಲು ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ಈ ಬಗ್ಗೆ ಪ್ರಚಾರ ಬಯಸಿಲ್ಲ. ಆದರೆ ಈಗಿನ ಶಾಸಕರು ತಾವೊಬ್ಬರೇ ಎಲ್ಲವನ್ನು ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಬಿ.ಜೆ.ಪಿ ಸಿದ್ಧವಿದೆ. ವೇದಿಕೆ ಸಿದ್ಧ ಪಡಿಸಿದರೆ ದಾಖಲೆಗಳ ಸಮೇತ ಸವಾಲಿಗೆ ತಯಾರಿದ್ದೇವೆ ಎಂದರು.
ಬಿ.ಜೆ.ಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಹೆಸರು ಸುಮಾರು ೯ ಬಾರಿ ಬದಲಾಗಿದೆ. ಆದರೆ ಕೇವಲ ಗಾಂಧಿ ಹೆಸರು ತೆಗೆದಿದ್ದಕ್ಕಾಗಿ ಕಾಂಗ್ರೆಸ್ ಈ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಜಿ ರಾಮ್ ಜಿ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದರು. ಇದಲ್ಲದೆ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅವಧಿಯಲ್ಲಿ ಉದ್ಘಾಟನೆಗೊಂಡ ಹಲವಾರು ಯೋಜನೆಗಳು ಬಿ.ಜೆ.ಪಿ ಅವಧಿಯಲ್ಲಿ ಪ್ರಾರಂಭವಾಗಿದ್ದು, ಈ ಯೋಜನೆಗಳನ್ನೂ ಕಾಂಗ್ರೆಸ್ನಿAದಲೇ ತರಲಾಗಿದ್ದು ಎಂಬುದಾಗಿಯೂ ಪಕ್ಷದ ಪ್ರಮುಖರು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮಾಜಿ ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ಜಿಲ್ಲಾ ಬಿ.ಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಗೂ ಜಿಲ್ಲಾ ವಕ್ತಾರ ಬಿ.ಕೆ ಅರುಣ್ ಕುಮಾರ್ ಹಾಜರಿದ್ದರು.