ಸೋಮವಾರಪೇಟೆ, ಜ. ೨೬: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಬಳಗದ ವತಿಯಿಂದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ೩೯ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾವಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ನಮ್ಮಿಂದಲೇ ಆಗಬೇಕು. ಇಂತಹ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿವೆ. ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ, ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಮಾಡಿಕೊಡಬೇಕು ಎಂದರು. ಪ್ರತಿಯೋರ್ವರು ಪ್ರತಿ ದಿನ ಅಲ್ಪ ಸಮಯವನ್ನಾದರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಯಾವುದೇ ಕ್ರೀಡೆಯಲ್ಲಿ ಬಹುಮಾನಕ್ಕಾಗಿ ಪಾಲ್ಗೊಳ್ಳದೆ; ಪ್ರತಿಭೆಗಳನ್ನು ಹೊರ ತರಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಸೋಲು ಗೆಲುವು ಕ್ರೀಡೆಯ ಅವಿಭಾಜ್ಯವಾಗಿದ್ದು, ಕ್ರೀಡಾಪಟುಗಳು ಎಲ್ಲವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ದಿ. ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದ ಭುವನ ಮಂದಾರ ಸಂಸ್ಥೆಯ ನಿರ್ದೇಶಕ ಮಸಗೋಡು ಲೋಕೇಶ್ ಮಾತನಾಡಿ, ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯಾಗಿದ್ದರು. ಅವರ ಸಾಧನೆಗಳು ಇಂದಿಗೂ ಪ್ರಪಂಚದಲ್ಲಿ ನೆನೆಯಲಾಗುತ್ತದೆ. ದೀನ ದಲಿತರ ಅಭ್ಯುಧಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ತಂದು ದೇಶದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದರು. ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಮಾತನಾಡಿ, ಸಂಘವು ಸ್ಥಾಪನೆಯಾಗಿ ೪೧ ವರ್ಷಗಳಾಗಿದ್ದು, ಕಳೆದ ೩೮ ವರ್ಷಗಳಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗಿದೆ ಎಂದರು.
ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗ, ೨೦ ವರ್ಷ ವಯೋಮಾನದೊಳಗಿನ ಯುವಕರು ಮತ್ತು ಸಾರ್ವಜನಿಕ ವಿಭಾಗದಲ್ಲಿ ಪಂದ್ಯಾವಳಿಗಳು ನಡೆಯಿತು. ಕಾರ್ಯಕ್ರಮದಲ್ಲಿ ಕಳಲೆ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಬ್ರಮಣಿ, ಕರ್ಕಳ್ಳಿ ಇಸಾಕ್, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಸಹಕಾರ್ಯದರ್ಶಿ ಎಚ್.ಜಿ. ರವೀಂದ್ರ, ಗೌರವ ಕಾರ್ಯದರ್ಶಿ ಜಗದೀಶ್, ಸಂಚಾಲಕ ಅಜೇಯ ಮತ್ತಿತರರು ಇದ್ದರು.