ವೀರಾಜಪೇಟೆ, ಫೆ. ೨೬: ವೀರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ ೫ಎ ಸೈಡ್ ರಿಂಗ್ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಮಾತನಾಡಿ, ಸೇನೆ ಹಾಗೂ ಹಾಕಿ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದ ಆಚಾರ , ವಿಚಾರ, ಸಂಸ್ಕೃತಿ , ಸಂಪ್ರದಾಯಗಳನ್ನು ನಾವೆಲ್ಲರು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು. ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಹಾಕಿ ಆಟಗಾರರಿದ್ದು ತಾಲೂಕಿಗೆ ಒಂದು ಟರ್ಫ್ ಮೈದಾನ ಬೇಕೆಂಬ ಬೇಡಿಕೆ ಕೇಳಿ ಬರುತ್ತಿದ್ದು, ಆದಷ್ಟು ಬೇಗ ಈ ಬಗ್ಗೆ ಗಮನಹರಿಸಲಾಗುವುದೆಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ , ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ , ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮೂಕಳೇರ ಕುಶಾಲಪ್ಪ, ನಾಪೋಕ್ಲು ಭಗವತಿ ಹಾಕಿ ಕ್ಲಬ್ ಸದಸ್ಯ ಅಚ್ಚಂದಿರ ಮಂದಣ್ಣ ಉಪಸ್ಥಿತರಿದ್ದರು.
ಒಟ್ಟು ೨೦ ತಂಡಗಳು ಭಾಗವಹಿಸಿದ್ದ ನಾಕೌಟ್ ಮಾದರಿಯ ಪಂದ್ಯದಲ್ಲಿ ಸೆಮಿಫೈನಲ್ ಹಂತಕ್ಕೆ ನಾಲ್ಕು ತಂಡಗಳು ಆಯ್ಕೆಯಾದವು.ಮೊದಲ ಸೆಮಿ ಫೈನಲ್ ಪಂದ್ಯಾಟ ಸೆಂಟ್ ಜೋಸೆಫ್ ಕಾಮರ್ಸ್ ಕಾಲೇಜ್ ಬೆಂಗಳೂರು ಹಾಗೂ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯ ಬೆಂಗಳೂರು ತಂಡಗಳ ನಡುವೆ ನಡೆದು ಸೆಂಟ್ ಜೋಸೆಫ್ಸ್ ಕಾಮರ್ಸ್ ತಂಡವು ೬-೧ ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿ ಫೈನಲ್ ಪಂದ್ಯ ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸಿಐಟಿ ಪೊನ್ನಂಪೇಟೆ ತಂಡಗಳ ನಡುವೆ ನಡೆದು ಕಾವೇರಿ ಕಾಲೇಜು ಗೋಣಿಕೊಪ್ಪಲು ೫ -೨ ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾಟವು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜುಗಳ ನಡುವೆ ನಡೆದು ೪- ೨ ಗೋಲುಗಳ ಅಂತರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಗೆದ್ದು ಪ್ರಥಮ ಸ್ಥಾನ ಪಡೆದು ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಸೆAಟ್ ಜೋಸೆಫ್ಸ್ ಕಾಮರ್ಸ್ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ೧೦ ಸಾವಿರ ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಸಿಐಟಿ ಕಾಲೇಜು ಪೊನ್ನಂಪೇಟೆ ೪-೨ ಗೋಲಿನ ಅಂತರದಲ್ಲಿ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯವನ್ನು ಸೋಲಿಸಿ ೩ನೇ ಸ್ಥಾನ ಪಡೆದು ೫ ಸಾವಿರ ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು, ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ೪ನೇ ಸ್ಥಾನ ಪಡೆದು ೨೫೦೦ ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಪಂದ್ಯಾಟದ ಶಿಸ್ತಿನ ತಂಡ ಬಹುಮಾನವನ್ನು ಸೆಂಟ್ ಜೋಸೆಫ್ಸ್ ಮೈಸೂರು ಪಡೆಯಿತು. ವೈಯಕ್ತಿಕವಾಗಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಸಿಐಟಿ ಪೊನ್ನಂಪೇಟೆ ಕಾಲೇಜಿನ ಬೆವನ್ ಗಣಪತಿ, ಪಂದ್ಯಾಟದಲ್ಲಿ ಅತಿ ಹೆಚ್ಚು ಗೋಲ್ ದಾಖಲಿಸಿದ ಪ್ರಶಸ್ತಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ರಿವಿನ್ , ಉತ್ತಮ ಆಟಗಾರ ಪ್ರಶಸ್ತಿಯನ್ನು ಮೈಸೂರಿನ ಸೇಪಿಯಂಟ್ ಕಾಲೇಜಿನ ಮುತ್ತಣ್ಣ , ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನ ಧನುಷ್ ಪಡೆದುಕೊಂಡರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳು , ದೈಹಿಕ ನಿರ್ದೇಶಕರು, ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ , ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.