ನಾಪೋಕ್ಲು, ಮಾ. ೧: ಅರೆಭಾಷೆ ಗೌಡ ವಿಕಾಸ ವೇದಿಕೆ ಮತ್ತು ರೋಟರಿ ಮಿಸ್ಟಿಹಿಲ್ಸ್ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಅರೆಭಾಷೆ ಗೌಡ ವಿಕಾಸ ವೇದಿಕೆಯ ೧೧ನೇ ಕಾರ್ಯಕ್ರಮದಲ್ಲಿ ಸುಮಾರು ೧೫ ಶಾಲೆಗಳಿಂದ ಭಾಗವಹಿಸಿದ್ದ ಮಕ್ಕಳಿಗೆ ಮೊದಲಿಗೆ ಲಿಖಿತ ಪರೀಕ್ಷೆ, ನಂತರ ಆಯ್ಕೆಯಾದ ೪ ಉತ್ತಮ ತಂಡಗಳ ಮಧ್ಯೆ ಅಂತಿಮ ಹಂತದಲ್ಲಿ ಸ್ಟೇಜ್ ಮೇಲೆ ಭಜರ್ ರೌಂಡ್‌ನಲ್ಲಿ ಮುಖಾಮುಖಿ ಪೈಪೋಟಿ ನಡೆಯಿತು.
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರತ್ನಾಕರ ರೈ ವಹಿಸಿ ಮಾತನಾಡಿ, ಮಕ್ಕಳಿಗೆ ಸ್ಫೂರ್ತಿ ತುಂಬಿದರು. ಅರೆಭಾಷೆ ಗೌಡ ವಿಕಾಸ ವೇದಿಕೆಯ ನಿರ್ದೇಶಕರಾದ ಪೊಕ್ಕುಳಂಡ್ರ ಪ್ರಹ್ಲಾದ್ ವಿಜೇತರಿಗೆ ೧೦,೦೦೦ / ೬,೦೦೦ / ೩,೦೦೦ ಬಹುಮಾನ ಮತ್ತು ಟ್ರೋಫಿ ನೀಡಿದರು. ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳ ಜ್ಞಾನಾಭಿವೃದ್ಧಿಗೆ ರಸಪ್ರಶ್ನೆಯಂತಹ ಕಾರ್ಯಕ್ರಮಗಳು ಅತ್ಯವಶ್ಯ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು.
ಯಶಿಕ ದೇವಯ್ಯ ಪ್ರಾರ್ಥಿಸಿ, ರಶ್ಮಿ ದೀಪ ನಿರೂಪಿಸಿ, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಕಾರ್ಯಪ್ಪ ವಂದಿಸಿದರು.
ವಿಜೇತರು: ಪ್ರಥಮ ಸ್ಥಾನ: ರಿಷಿತ್ ಕೆ.ಎಸ್. ಮತ್ತು ಸಂಸ್ಕಾರ್ ಎಂ.ಎA., ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಮಡಿಕೇರಿ.
ದ್ವಿತೀಯ ಸ್ಥಾನ: ದಿವ್ಯಾಂಶಿ ಪಾತಿದಾರ್ ಮತ್ತು ಮನಿಷಾ ಎಂ.ಟಿ., ಪಿಎಂಶ್ರೀ ಜವಹರ್ ನವೋದಯ ವಿದ್ಯಾಲಯ, ಗಾಳಿಬೀಡು.
ತೃತೀಯ ಸ್ಥಾನ: ಕಾನಡ್ಕ ಯಶಿಕ ದೇವಯ್ಯ ಮತ್ತು ಆದಿತ್ಯ ಕೆ.ಎಂ., ಕೊಡಗು ವಿದ್ಯಾಲಯ, ಮಡಿಕೇರಿ.