ಸಿದ್ದಾಪುರ, ಮಾ. ೯: ಹಣಕಾಸಿನ ವ್ಯವಹಾರದಲ್ಲಿ ಶಿಕ್ಷೆಗೆ ಒಳಪಟ್ಟು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರದ ನಿವಾಸಿ ಹಾಗೂ ಪತ್ರಕರ್ತನಾಗಿದ್ದ ವಸಂತ್ ಕುಮಾರ್.ಕೆ(ವಸಂತ) ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯೊಬ್ಬರಿಂದ ಹಣ ಪಡೆದು ಅವರಿಗೆ ಹಿಂದಿರುಗಿಸಿ ನೀಡದೆ ಸತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಆದರೆ ವಸಂತ ೨೦೧೫ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯ ಈತನಿಗೆ ವಾರಂಟ್ ವಿಧಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಿದ್ದಾಪುರ ಪೊಲೀಸರು ಸೋಮವಾರದಂದು ವಸಂತನನ್ನು ಪತ್ತೆ ಹಚ್ಚಿ ಸಿದ್ದಾಪುರದಲ್ಲಿ ಬಂಧಿಸಿರುತ್ತಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್, ಮುಖ್ಯಪೇದೆ ಪ್ರಕಾಶ್ ಆಚಾರಿ, ಸಿಬ್ಬಂದಿಗಳಾದ ಚಂದನ್, ಮಣಿಕಂಠ, ಪಾಲ್ಗೊಂಡಿದ್ದರು.