ಕುಶಾಲನಗರ, ಮಾ. ೧೨: ಸಮಾಜದಲ್ಲಿ ನೊಂದ ಜನರು ಹಾಗೂ ಕಾನೂನು ಚೌಕಟ್ಟಿನ ಸಮಸ್ಯೆಗಳಿಗೆ ಸಿಲುಕಿದ ನಾಗರಿಕರಿಗೆ ಶೀಘ್ರ ನ್ಯಾಯ ದೊರಕಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಕುಶಾಲನಗರದ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ತಾಲೂಕು ಕಾನೂನು ಸೇವಾ ಸಮಿತಿಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಿ ಪ್ರಕರಣಗಳ ಮೂಲಕ ನ್ಯಾಯಾಧೀಶರ ಕೆಲಸ ಕಾರ್ಯಗಳ ಒತ್ತಡ ಕಡಿಮೆಯಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಸಂಬAಧ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರುಗಳ ಸಹಾಯ ಪ್ರಮುಖವಾಗಿದೆ ಎಂದರು. ಯಾವುದೇ ವಿಷಯಗಳು ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು ಎಂದ ನ್ಯಾಯಾಧೀಶರು, ಅರಿವಿನ ಕೊರತೆಯಿಂದ ನೊಂದವರಿಗೆ ಸೌಲಭ್ಯ ಲಭಿಸಲು ಅಸಾಧ್ಯ ಎಂದು ಹೇಳಿದರು. ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ರಾಜಿ ತೀರ್ಮಾನಕ್ಕೆ ಅಥವಾ ಸಮಸ್ಯೆಗಳ ಇತ್ಯರ್ಥಕ್ಕೆ ಯಾವುದೇ ರೀತಿಯ ಮಿತಿ ಇರುವುದಿಲ್ಲ ಎಂದು ತಿಳಿಸಿದರು.

ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ರೇಖಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ತಾಲೂಕು ಸದಸ್ಯ ಕಾರ್ಯದರ್ಶಿಗಳಾದ ಚೈತ್ರ ಎಲ್ ಮಾತನಾಡಿ ಕುಶಾಲನಗರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸ್ಥಾಪನೆಗೆ ಸಹಕಾರ ನೀಡಿದ ಸ್ಥಳೀಯ ವಕೀಲರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ. ನಾಗೇಂದ್ರ ಬಾಬು ಅವರು ಮಾತನಾಡಿ, ರಾಜಿ ಸಂಧಾನಗಳ ಮೂಲಕ ನ್ಯಾಯಾಲಯದ ಕಾರ್ಯಕಲಾಪಗಳ ಹೊರೆ ಕಡಿಮೆಯಾಗಲು ಸಾಧ್ಯ ಎಂದರಲ್ಲದೆ ಕಾನೂನು ಚೌಕಟ್ಟಿಗೆ ಒಳಪಟ್ಟಿರುವ ಜಟಿಲ ಪ್ರಕರಣಗಳನ್ನು ಮಾತ್ರ ತೀರ್ಪಿನ ಮೂಲಕ ಪರಿಹರಿಸಬೇಕಾಗುತ್ತದೆ ಎಂದರು. ಕುಶಾಲನಗರದಲ್ಲಿ ಸೀನಿಯರ್ ಸಿವಿಲ್ ಜಡ್ಜ್ ವಿಭಾಗ ತೆರೆಯುವಂತೆ ಈ ಸಂದರ್ಭ ಅವರ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಪಿ. ಹೇಮಂತ್, ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ, ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಮತ್ತಿತರರು ಇದ್ದರು.

ಕುಶಾಲನಗರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮೋಹನ್ ಕುಮಾರ್ ಸ್ವಾಗತಿಸಿ, ವಂದಿಸಿದರು.