ಭಾಗಮಂಡಲ, ಮಾ. ೧೨: ಒಂದೆಡೆ ಸುಡುಬಿಸಿಲು.. ಮತ್ತೊಂದೆಡೆ ಭಕ್ತರ ಕಾತರ.. ನೆರೆದ ಭಕ್ತರ ಭಕ್ತಿ ಭಾವದ ನಡುವೆ ಕೃಷ್ಣನ ಕೊಳಲಿನ ಹಬ್ಬ ಚಿನ್ನತಪ್ಪ ಉತ್ಸವ ವಿಜೃಂಭಣೆಯಿAದ ನೆರವೇರಿತು. ಬೆಳಗಿನ ಹಬ್ಬ, ಧಾರೆ ಪೂಜೆ, ಎತ್ತು ಪೋರಾಟ, ಚೆಂಬು ಚೆರ್ಕ್.. ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳಿಗೆ ಅಯ್ಯಂಗೇರಿಯ ಚಿನ್ನತಪ್ಪ ಮಂದ್ ಸಾಕ್ಷಿಯಾಯಿತು.
ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಕೃಷ್ಣನ ಕೊಳಲಿನ ಹಬ್ಬವೆಂದೇ ಖ್ಯಾತಿ ಪಡೆದ ಚಿನ್ನತಪ್ಪ ಉತ್ಸವ ಗುರುವಾರ ಅಧಿಕ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಜರುಗಿತು. ಬುಧ
ವಾರ ಬೆಳಿಗ್ಗೆ ಕೃಷ್ಣನ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತರಲಾಯಿತು. ಈ ವರ್ಷ ಚಿಂಗAಡ ಶಿವಾಜಿ ಕೊಳಲನ್ನು ಹಿಡಿದು ದೇವಾಲಯದ ಮುಂಭಾಗದಲ್ಲಿ ಮೂರು ಬಾರಿ ನುಡಿಸಿದರು. ಸೂರ್ಯೋದಯದ ವೇಳೆಗೆ ವಿವಿಧೆಡೆಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕೊಳಲು ನಾದ ಆಲಿಸಿದರು. ನಿರ್ದಿಷ್ಟ ಜಾಗದಲ್ಲಿ ಕೊಳಲನ್ನು ಮೂರು ಬಾರಿ ನುಡಿಸಿ ದೇವಾಲಯಕ್ಕೆ ಹಿಂತಿರುಗಲಾಯಿತು. ಕತ್ತಲಾವರಿಸಿದ ನಂತರ ಕಲ್ಲು ಹೊಳೆಗೆ ತೆರಳಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಣ್ಣೆ, ಹರಕೆ ಸಲ್ಲಿಸಿದ್ದು ಕಂಡು ಬಂತು. ಮಧ್ಯಾಹ್ನ ೧.೦೫ರ ವೇಳೆಗೆ ಮತ್ತೆ ಕೊಳಲನ್ನು ಹಿಡಿದು ಊರ ಮಂದ್‌ಗೆ ಬಂದು ನಿರ್ದಿಷ್ಟ ಜಾಗದಲ್ಲಿ ಕೊಳಲನ್ನು ನುಡಿಸಲಾಯಿತು. ಊರ ಮಂದ್‌ಗೆ ಕೊಳಲನ್ನು ತರುವ ಸಂದರ್ಭ ಭಕ್ತಾದಿಗಳು ಶ್ರದ್ದಾಭಕ್ತಿಯಿಂದ ವೀಕ್ಷಿಸಿದರು. ಕೊಳಲ ನಾದವನ್ನು ಆಲಿಸಿ ಪುನೀತರಾದರು. ಊರಮಂದ್‌ಗೆ ಆಗಮಿಸುವ ಸಂದರ್ಭದಲ್ಲಿ ಗರುಡ ಪಕ್ಷಿಯೊಂದು ಆಕಾಶದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ದೇವಾಲಯಕ್ಕೆ ತೆರಳಿತು. ಈ ಅಪೂರ್ವ ಘಟನೆ ಭಕ್ತರಿಗೆ ವಿಶೇಷ ಎನಿಸಿತು.
ನಂತರ ನಾಳಿಯಂಡ ಮಾನಿಯಿಂದ ಎತ್ತುಪೋರಾಟ ಹೊರಟ ಸಂದರ್ಭ ಶ್ವೇತವಸ್ತ್ರಧರಿಸಿದ ಮಹಿಳೆಯರು ಚೆಂಬು ಚೆರ್ಕ್ನೊಂದಿಗೆ ಊರ ಮಂದ್‌ಗೆ ಬಂದರು. ಮೂರು ಬಾರಿ ಎತ್ತುಪೋರಾಟ ನಡೆಯಿತು. ಬಳಿಕ ತೆಂಗಿನಕಾಯಿಗೆ ಗುಂಡುಹೊಡೆದು ಊರಿನ ಕಟ್ಟು ಸಡಿಲಿಸಲಾಯಿತು. ಈ ಬಾರಿ ತೆಂಗಿನಕಾಯಿಗೆ ಕಾವೇರಿಮನೆ ಸುಗು ಮತ್ತು ಆಚೀರ ಲವ ಗುಂಡು ಹೊಡೆದರು.
ನಂತರ ಊರ ಮಂದ್‌ನಿAದ ಧಾರಾಪೂಜೆ ನಡೆದ ಸ್ಥಳಕ್ಕೆ ಹಿಂತಿರುಗಲಾಯಿತು. ಶುದ್ದಮುದ್ರಿಕೆಯಲ್ಲಿದ್ದವರನ್ನು ತಪ್ಪಡ್ಕ ಕಟ್ಟಿ ಆಹ್ವಾನಿಸಲಾಯಿತು. ಅಲ್ಲಿ ಹಲವರು ಹರಕೆ ಸಲ್ಲಿಸಿ ಅಕ್ಕಿ ಹಾಕಿದರು. ಬಳಿಕ ವಿವಿಧ ಪೂಜಾ ಕಾರ್ಯಕ್ರಮ ನಡೆದು ದೇವಾಲಯಕ್ಕೆ ತೆರಳಲಾಯಿತು.
ಊರಿನ ೧೪ ಕುಳದವರು ಭಾಗಿಯಾಗಿದ್ದ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ತಕ್ಕರಾದ ಬಿದ್ದಿಯಂಡ ಸುಭಾಷ್ ನೇತೃತ್ವದಲ್ಲಿ ಉತ್ಸವ ಸಾಂಗವಾಗಿ ನೆರವೇರಿತು. ಶುಕ್ರವಾರ ಭಂಡಾರ ಹಾಗೂ ಅನ್ನಸಂತರ್ಪಣೆ ಹಾಗೂ ಹರಕೆ ಸಲ್ಲಿಸುವ ಕಾರ್ಯಕ್ರಮ ನೆರವೇರಲಿದೆ.
-ಸುನಿಲ್ ಕುಯ್ಯಮುಡಿ