ಮಡಿಕೇರಿ, ಮಾ. ೧೨: ಕೊಡಗು ಜಿಲ್ಲೆಯಲ್ಲಿ ನಿರಂತರ ಕಾಡಾನೆ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿರುವುದರಿಂದ ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಶಾಶ್ವತ ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಮಹಿಳಾ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ೧೦ ದಿನಗಳಲ್ಲಿ ಕಾಡಾನೆ ದಾಳಿಗೆ ಎರಡು ಅಮಾಯಕ ಹೆಣ್ಣು ಜೀವಗಳು ಬಲಿಯಾಗಿದ್ದು, ಇದು ಅತ್ಯಂತ ವಿಷಾದಕರ. ಜಿಲ್ಲೆಯಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ, ವನ್ಯಜೀವಿಗಳ ನಿರಂತರ ದಾಳಿ ಆತಂಕ ಸೃಷ್ಟಿಸಿದೆ. ಮಾನವರು ಮಾತ್ರವಲ್ಲದೆ ಜಾನುವಾರುಗಳು ಕೂಡ ಬಲಿಯಾಗುತ್ತಿವೆ, ಬೆಳೆ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಕೇವಲ ಯೋಜನೆಯನ್ನು ಘೋಷಿಸಿದರೆ ಸಾಲದು. ಇವುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ವನ್ಯಜೀವಿಗಳ ದಾಳಿಯಿಂದ ಜಿಲ್ಲೆಯ ಜನರನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದರೂ ಸರಕಾರ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊAಡಿಲ್ಲ. ಮೃತರ ಕುಟುಂಬಗಳಿಗೆ ಕೇವಲ ಪರಿಹಾರದ ಚೆಕ್ ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗುತ್ತಿದೆಯೇ ಹೊರತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯುವಲ್ಲಿ ಆಡಳಿತಗಾರರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅರಣ್ಯ ಸಚಿವರು ಶೀಘ್ರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ, ಕೃಷಿಕರ ಹಾಗೂ ಗ್ರಾಮಸ್ಥರ ಸಭೆ ನಡೆಸಿ ಪರಿಹಾರ ಸೂಚಿಸದಿದ್ದರೆ ಅರಣ್ಯ ಭವನದ ಎದುರು ಮಹಿಳಾ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.