ವೀರಾಜಪೇಟೆ, ಮಾ. ೧೨: ವೀರಾಜಪೇಟೆ ಉಪ ವಿಭಾಗದ ಸೆಸ್ಕ್ ಕಚೇರಿಯ ನೂತನ ಕಟ್ಟಡದ ಶಿಲಾನ್ಯಾಸವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೆರವೇರಿಸಿದರು.
ವೀರಾಜಪೇಟೆ ಕ್ಷೇತ್ರದಿಂದ ವಿದ್ಯುತ್ ಗುಣಮಟ್ಟವನ್ನು ಉತ್ತಮಪಡಿಸಲು ಹಾಗೂ ನಿರಂತರ ವಿದ್ಯುತ್ ಸರಬರಾಜು ಗ್ರಾಹಕರಿಗೆ ಹಾಗೂ ರೈತರಿಗೆ ಒದಗಿಸಲು ವಿಶೇಷ ಅನುದಾನ ತರಲಾಗಿದ್ದು, ಇದರ ಭಾಗವಾಗಿ ವೀರಾಜಪೇಟೆ ಉಪವಿಭಾಗದ ಕಚೇರಿಗೆ ನೂತನ ಕಟ್ಟಡ ನಿರ್ಮಿಸಿಕೊಡಲು ಭೂಮಿಪೂಜೆ ನೆರವೇರಿಸಿ, ಈ ಕಟ್ಟಡವು ಶೀಘ್ರ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತಾಗಲಿ ಎಂದು ಹಾರೈಸಿದರು.
ಕಾಮಗಾರಿ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಈ ಕಟ್ಟಡದ ಬಳಿ ತಡೆಗೋಡೆ ನಿರ್ಮಾಣ ಆಗಲಿದ್ದು, ರೂ. ೧.೩೯ ಕೋಟಿಗಳಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ನೂತನ ಕಟ್ಟಡಕ್ಕೆ ರೂ. ೨.೫ ಕೋಟಿ ಅನುದಾನ ಒದಗಿ ಬಂದಿದೆ ಎಂದು ತಿಳಿಸಿದರು.
ಪವರ್ ಮ್ಯಾನ್ ದಿನಾಚರಣೆ ಅಂಗವಾಗಿ, ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ಪವರ್ ಮ್ಯಾನ್‌ಗಳಿಗೆ ಶಾಸಕರು ಶುಭಾಶಯ ತಿಳಿಸಿದರು.
ಅಲ್ಲದೆ ವೀರಾಜಪೇಟೆ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪವರ್‌ಮ್ಯಾನ್‌ಗಳನ್ನು ಗುರುತಿಸಿ ಅವರಿಗೆ ಬಹುಮಾನವನ್ನು ಶಾಸಕರು ಈ ಸಂದರ್ಭ ವಿತರಣೆ ಮಾಡಿದರು.
ವೀರಾಜಪೇಟೆಯ ಹನುಮಂತ ಹಿರೇಗೌಡರ್, ಮಂಜುನಾಥ್ ಪಟ್ಟದ್, ಆಸಿಫ್ ವಕ್ಕದ್, ಅರುಣ್ ಸಿದ್ದಾಪುರ, ನಂದೀಶ್ ಪಾಲಿಬೆಟ್ಟ ಇವರಿಗೆ ಸಂಸ್ಥೆ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಹಾಗೂ ನಿಕಟಪೂರ್ವ ಪುರಸಭೆ ಸದಸ್ಯರು ಪಟ್ಟಡ ರಂಜಿ ಪೂಣಚ್ಚ, ಇಲಾಖೆಯ ಅಧಿಕಾರಿಗಳಾದ ಸುರೇಶ್, ರವಿಶಂಕರ್, ರಾಮಚಂದ್ರ, ಸೋಮೇಶ್, ಪಾಪಣ್ಣಾಚಾರಿ, ಯೋಗರಾಜ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.