ಚೆಯ್ಯಂಡಾಣೆ/ನಾಪೋಕ್ಲು, ಮಾ. ೧೭: ಪಾದಾಚಾರಿ ತಾಯಿ ಮಗಳಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು-ವೀರಾಜಪೇಟೆ ತೆರಳುವ ಮುಖ್ಯರಸ್ತೆಯ ಬೇತು ಗ್ರಾಮದಲ್ಲಿ ನಡೆದಿದೆ.

ಪಾಲೂರು ಗ್ರಾಮದ ನಿವಾಸಿಗಳಾದ ಪಿ.ಎಂ. ನೀಲ ಹಾಗೂ ಪುತ್ರಿ ಮೋಕ್ಷಿತ ಎಂಬವರು ನಾಪೋಕ್ಲು ಪಟ್ಟಣದಿಂದ ಬೇತು ಗ್ರಾಮದಲ್ಲಿ ನಡೆಯಲಿರುವ ಸಂಘದ ಸಭೆಯಲ್ಲಿ ಭಾಗವಹಿಸಲು ಬೇತು ರಸ್ತೆ ಬದಿಯ ಮೂಲಕ ತೆರಳುತ್ತಿರುವ ಸಂದರ್ಭ ವೀರಾಜಪೇಟೆ ಕಡೆಯಿಂದ ಇದೇ ರಸ್ತೆಯ ಮಾರ್ಗದಲ್ಲಿ ಎಮ್ಮೆಮಾಡು ಗ್ರಾಮದ ನಿವಾಸಿ ಜಂಶೀರ್ ಎಂಬವರು ಚಲಾಯಿಸಿಕೊಂಡು ಬಂದ ಮಾರುತಿ ಸೆಲೇರಿಯೋ ಕಾರು ಡಿಕ್ಕಿಯಾಗಿದೆ. ಪರಿಣಾಮ ತಾಯಿ, ಮಗಳು ರಸ್ತೆಗೆ ಬಿದ್ದಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುವಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಇದ್ದು ಚಾಲಕನಿಲ್ಲದೆ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಪರದಾಡಿದ ಘಟನೆ ನಡೆಯಿತು. ಬಳಿಕ ವೀರಾಜಪೇಟೆಯಿಂದ ಆ್ಯಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ತಡವಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ ಆರೋಗ್ಯ ಇಲಾಖೆಯವರು ಕೂಡಲೇ ಎಚ್ಚೆತ್ತುಕೊಂಡು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆ್ಯಂಬುಲೆನ್ಸ್ಗೆ ದಿನದ ೨೪ ಗಂಟೆ ಸೇವೆಗೆ ಚಾಲಕರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ. - ಅಶ್ರಫ್/ದುಗ್ಗಳ