ವೀರಾಜಪೇಟೆ, ಮಾ. ೩೦: ಸ್ವಂತ ವೆಚ್ಚದಲ್ಲಿ ವೀರಾಜಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ತುರ್ತು ನೀರು ಸರಬರಾಜು ವ್ಯವಸ್ಥೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಚಾಲನೆ ನೀಡಿದರು.
ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ವೀರಾಜಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತುರ್ತು ನೀರಿನ ಸೌಲಭ್ಯ ಕಲ್ಪಿಸಲು ರೂ ೨೮ ಲಕ್ಷ ವೆಚ್ಚದ ಟ್ಯಾಂಕರ್ ವಾಹನವನ್ನು ಶಾಸಕರು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಿದರು. ಬಳಿಕ ಶಾಸಕರು ಮಾತನಾಡಿ, ತೀವ್ರ ಬೇಸಿಗೆಯಿಂದ ಕ್ಷೇತ್ರದಲ್ಲಿ ನೀರಿನ ಅಭಾವ ತಲೆದೋರಿದ್ದು, ಸಾರ್ವಜನಿಕರಿಗೆ ನೀರಿನ ಅಭಾವ ಆಗದಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮಹಿಳಾ ಅಧ್ಯಕ್ಷೆ ನಯನ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆಯ ಮಾಜಿ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಪಿ.ಕೆ., ಪುರಸಭೆ ಅಭಿಯಂತರ ಹೇಮ್‌ಕುಮಾರ್, ಪುರಸಭೆಯ ಸಿಬ್ಬಂದಿ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.