ಕೂಡಿಗೆ, ಏ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಕಾಳಿದೇವರ ಹೊಸೂರು ಮತ್ತು ಮಾವಿನಹಳ್ಳಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜೋತ್ಸವು ಶ್ರದ್ಧಾಭಕ್ತಿ, ವಿಶೇಷ ಹೋಮ-ಹವನ ಸೇರಿದಂತೆ ಪೂಜಾ ಕೈಂಕರ್ಯಗಳೊAದಿಗೆ ನೆರವೇರಿತು.

ಪೂಜೋತ್ಸವ ಅಂಗವಾಗಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪ ದೇವತೆಗಳಿಗೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಇತ್ಯಾದಿ ಪೂಜೆಗಳು ಕೇರಳ ಹರಿಪ್ರಸಾದ್ ನೇತೃತ್ವದಲ್ಲಿ ತಂಡದ ವತಿಯಿಂದ ನೆರವೇರಿತು. ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ಕಾರ್ಯ ನಡೆದವು.

ಸಂಜೆ ೭ ಗಂಟೆಗೆ ದೀಪಾಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದವು. ೨೦೨೬-೨೭ನೇ ಸಾಲಿನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ, ೨೦೨೫-೨೬ನೇ ಸಾಲಿನ ಜಮಾ ಮತ್ತು ಖರ್ಚಿನ ವರದಿ ವಾಚಿಸಲಾಯಿತು. ದೇವಾಲಯ ಸೇರಿದಂತೆ ಗ್ರಾಮವು ವಿದ್ಯುತ್ ದೀಪಗಳಿಂದ ಅಲಂಕೃತಗೊAಡಿದ್ದವು. ದೇವಾಲಯ ಆವರಣದಲ್ಲಿ ಸ್ಥಳೀಯ ಮಹಿಳಾ ಸಂಘಟನೆಯವರ ವತಿಯಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆದವು.

ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಹಾರಂಗಿ, ಮದಲಾಪುರ, ಹುದುಗೂರು, ಬ್ಯಾಡಗೊಟ್ಟ, ಕುಶಾಲನಗರ ಸುತ್ತಮುತ್ತಲಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್, ಸೇರಿದಂತೆ ಉಪಾಧ್ಯಕ್ಷ, ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.