ಕೂಡಿಗೆ, ಏ. ೧: ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕಣಿವೆಯಲ್ಲಿ ನಡೆದ ರಾಜ್ಯಮಟ್ಟದ ಕುಣಿಯೋಣ ಬಾರಾ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಚಾಂಪಿಯನ್ ಅಗಿ ಹೊರಹಮ್ಮಿದೆ.

ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ "ಕುಣಿಯೋಣ ಬಾರಾ" ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ೧೨ಕ್ಕೂ ಅಧಿಕ ನೃತ್ಯ ತಂಡಗಳು ಭಾಗವಹಿಸಿದ್ದವು.

ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಪಟುಗಳು ರೋಮಾಂಚನಕಾರಿ ನೃತ್ಯದ ಮೂಲಕ ತೀರ್ಪುಗಾರರ ಮನಗೆದ್ದು ಉತ್ತಮ ತೀರ್ಪಿನೊಂದಿಗೆ ಪ್ರಥಮ ಬಹುಮಾನ ಪಡೆಯುವುದರ ಮೂಲಕ ಕುಣಿಯೋಣ ಬಾರಾ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡರು.

ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಮಂಗಳೂರಿನ ಹೆಸರಾಂತ ನೃತ್ಯ ಸಂಯೋಜಕರಾದ ಮನೋಜ್ ಕಿಶನ್, ಶಿವಮೊಗ್ಗದ ನೃತ್ಯ ಸಂಯೋಜಕಿ ಚಂದನ ಮತ್ತು ಕುಶಾಲನಗರದ ನೃತ್ಯ ಶಿಕ್ಷಕ ಮಾಸ್ಟರ್ ಶಂಕರಯ್ಯ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿಜೇತರಾದ ತಂಡಕ್ಕೆ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ತೀರ್ಪುಗಾರರು ಬಹುಮಾನ ವಿತರಿಸಿದರು.

ಮೈಸೂರಿನ ಮನೋಜ್ ಕುಮಾರ್ ತಮ್ಮ ನಿರೂಪಣೆ ಮತ್ತು ಮಿಮಿಕ್ರಿ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಗ್ರಾಮಸ್ಥರು ಕುಣಿದು ಕುಪ್ಪಳಿಸುವ ಮೂಲಕ ಪ್ರೋತ್ಸಾಹಿಸಿ ತಂಡಗಳಿಗೆ ಅಭಿನಂದಿಸಿದರು.

ಬಹುಮಾನ ವಿತರಣೆಯನ್ನು ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ನೆರವೇರಿಸಿದರು. ಈ ಸಂದರ್ಭ ಕಾರ್ಯದರ್ಶಿ ಮಾಧವ, ಹಕ್ಕೆಯ ಉದ್ಯಮಿ ಮೋಹನ್, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಸಮಿತಿ ನಿರ್ದೇಶಕರಾದ ಮಧು ಕುಮಾರ್, ನವೀನ್, ಸೇರಿದಂತೆ ಇನ್ನಿತರರು ಹಾಜರಿದ್ದರು.