ಚೆಟ್ಟಳ್ಳಿ, ಏ. ೧: ಸುಮಾರು ೩೦೦ ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಈರಳೆ ಗ್ರಾಮದ ಶ್ರೀ ಪೊವ್ವೊದಿ (ಭಗವತಿ)ವಾರ್ಷಿಕೋತ್ಸವ ಸಂಪ್ರದಾಯಬದ್ಧವಾಗಿ ನಡೆಯಿತು.

ಪುರಾಣ ಪ್ರಸಿದ್ಧಿಯ ಪ್ರಕಾರ, ಮೂರು ಪೊವ್ವೊದಿ (ಭಗವತಿ) ದೇವಿಯರು ವಿಭಿನ್ನ ಪ್ರದೇಶಗಳಲ್ಲಿ ನೆಲೆಗೊಂಡಿದ್ದು, ಒಂದು ದೇವಿ ಚೆಟ್ಟಳ್ಳಿ, ಮತ್ತೊಂದು ಈರಳೆ ಗ್ರಾಮ ಹಾಗೂ ಮೂರನೇಯದು ಶ್ರೀಮಂಗಲ ಪ್ರದೇಶದಲ್ಲಿ ನೆಲೆನಿಂತಿದ್ದಾಳೆ ಎಂಬ ನಂಬಿಕೆ ಇದೆ.

ಸಹೋದರಿ ದೇವಿಯನ್ನು ನೋಡುವ ಉದ್ದೇಶದಿಂದ ಚೆಟ್ಟಳ್ಳಿ ಭಗವತಿ ಪಶ್ಚಿಮಾಭಿಮುಖವಾಗಿ ಇರುವುದೂ ವಿಶೇಷವಾಗಿದೆ. ಈರಳೆ ಭಗವತಿ ದೇವಾಲಯದಲ್ಲಿ ಮಾರ್ಚ್ ೨೩ ರಂದು ರಾತ್ರಿ ಗ್ರಾಮಸ್ಥರು ದೇವರ ಜ್ಯೋತಿಯನ್ನು ತಂದು ಉತ್ಸವಕ್ಕೆ ಚಾಲನೆ ನೀಡಿದರು.

ಮಾ.೨೭ರ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಊರುತಕ್ಕರಾದ ಪೊರಿಮಂಡ ರವಿ ನಾಣಯ್ಯ ಅವರ ಮನೆಯಿಂದ ದೇವರ ಭಂಡಾರವನ್ನು ತರಲಾಯಿತು. ನಂತರ ದೇವತಕ್ಕರಾದ ಬಲ್ಲಾರಂಡ ರಾಜಪ್ಪ ಅವರ ಸಮ್ಮುಖದಲ್ಲಿ ಬಲ್ಲಾರಂಡ ಕುಟುಂಬ ವತಿಯಿಂದ ಎತ್ತುಪೋರಾಟ ಮತ್ತು ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಮೇದರಕೊಟ್ಟಿಗೆ ಪೀಲಿಯಾಟ್, ಬೊಳಕಾಟ್ ಹಾಗೂ ಕೈತಳ ಆಟಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ. ಮಾರ್ಚ್ ೨೮ರಂದು ಬೆಳಿಗ್ಗೆ ಪರದೇವರ ಕೋಲ ಆಚರಣೆಯೊಂದಿಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.