ಕೂಡಿಗೆ, ಮೇ ೪: ಕೂಡ್ಲೂರು ಇಂಡಸ್ಟಿçಯಲ್ ಏರಿಯಾ ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ನೇತೃತ್ವದಲ್ಲಿ ಘಟಕದ ಸದಸ್ಯರು, ಕಾಫಿ ವರ್ಕ್ಸ್ ನ ಮಹಿಳಾ ಕಾರ್ಮಿಕರು ಕೈಗಾರಿಕಾ ಘಟಕದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದು ಕಾರ್ಮಿಕರ ಪರ ಘೋಷಣೆಗಳನ್ನು ಮೊಳಗಿಸಿದರು.
ಎಸ್.ಎಲ್.ಎನ್. ವರ್ಕ್ಸ್ ಬಳಿಯಿಂದ ದೊಡ್ಡಮ್ಮ ತಾಯಿ ಬನದ ತನಕ ಮೆರವಣಿಗೆ ನಡೆಸಿದರು. ವರ್ಕ್ಸ್ ಗಳಲ್ಲಿ ಕೆಲಸ ಆರಂಭ ಮತ್ತು ಅಂತ್ಯದ ಸಮಯದಲ್ಲಿ ಕೂಡ್ಲೂರು ಕೈಗಾರಿಕಾ ಕೇಂದ್ರದ ಹೆದ್ದಾರಿಯಲ್ಲಿ ಸಾರಿಗೆ ಬಸ್‌ಗಳನ್ನು ನಿಲುಗಡೆಗೊಳಿಸಬೇಕಿದೆ, ಸುಸಜ್ಜಿತ ಬಸ್ ತಂಗುದಾಣ ಒದಗಿಸುವಂತೆ ಮಹಿಳೆಯರು ಒತ್ತಾಯಿಸಿದರು.
ಈ ಸಂದರ್ಭ ಪಾಲ್ಗೊಂಡಿದ್ದ ಐ.ಎನ್.ಟಿ.ಯು.ಸಿ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಮಾತನಾಡಿ, ಸರಕಾರ ಕಾರ್ಮಿಕರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸಿ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಿ ಕಾರ್ಮಿಕರ ಹಿತ ಕಾಯಬೇಕಿದೆ ಎಂದರು.
ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಮಾತನಾಡಿ, ಕೆಲವು ಕಾಫಿ ಘಟಕಗಳಲ್ಲಿ ತಾರತಮ್ಯ ಕೊನೆಗಾಣಬೇಕಿದೆ,ಸಮಾನ ವೇತನ ವ್ಯವಸ್ಥೆ ಜಾರಿಯಾಗಬೇಕಿದೆ. ಕಾರ್ಮಿಕರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಗಳು ನಿಲುಗಡೆಗೊಳಿಸುತ್ತಿಲ್ಲ. ಇದರ ವಿರುದ್ದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಮಿಕ ಘಟಕದ ಕಾರ್ಯದರ್ಶಿ ಶಾಂತ, ಖಜಾಂಚಿ ಪುಷ್ಪ, ಕೂಡುಮಂಗಳೂರು ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ಪ್ರಮುಖರಾದ ಸುಜಾತ, ರತ್ನಮ್ಮ ಮತ್ತಿತರರು ಇದ್ದರು.