ವೀರಾಜಪೇಟೆ, ಮೇ ೧೭: ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಮುಗುಚಿಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕ್ಲೂರು ಚೆಂಬೆಬೆಳ್ಳೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ದೇವಯ್ಯ ಎಂಬವರ ಲೈನ್‌ಮನೆಯಲ್ಲಿ ವಾಸವಿದ್ದ ಪಾಲಿಬೆಟ್ಟ ನಿವಾಸಿ ವಸಂತ (೫೯) ಮೃತ ವ್ಯಕ್ತಿ.

ದೇವಯ್ಯ ಅವರ ತೋಟದಲ್ಲಿ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದ ವಸಂತ ಮಹೇಂದ್ರ ಜೀಪ್ (ಕೆಎ ೧೨ಎಂ೩೩೮೪) ನಲ್ಲಿ ವೀರಾಜಪೇಟೆ ನಗರಕ್ಕೆ ಆಗಮಿಸಿ ಮನೆಗೆ ತೆರಳುವ ವೇಳೆ ಕುಕ್ಲೂರು ಚೆಂಬೆಬೆಳ್ಳೂರು ಮುಖ್ಯರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಗದ್ದೆ ಭಾಗಕ್ಕೆ ಮುಗುಚಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ವಸಂತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.