ಸಿದ್ದಾಪುರ, ಮೇ ೨೧: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ವಿದ್ಯುತ್ ತಂತಿಯ ಮೇಲೆ ಮರಗಳನ್ನು ದೂಡಿ ಹಾನಿಗೊಳಿಸಿದೆ.

ನೆಲ್ಲಿಹುದಿಕೇರಿ ಗ್ರಾಮದ ಮೇರಿ ಲ್ಯಾಂಡ್ ಕಾಫಿ ತೋಟದೊಳಗೆ ಹಾದುಹೋಗಿರುವ ೧೧ ಕೆ.ವಿ. ವಿದ್ಯುತ್ ತಂತಿಯ ಮೇಲೆ ಕಾಡಾನೆಗಳು ಮರಗಳನ್ನು ದೂಡಿ ಹಾಕಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ವಿಚಾರ ತಿಳಿದು ಸ್ಥಳಕ್ಕೆ ಚೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕವನ್ನು ದುರಸ್ತಿಪಡಿಸಿದರು.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದಲ್ಲದೆ ಬೆಟ್ಟದಕಾಡು, ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆಯ ಕಾಫಿ ತೋಟಗಳಲ್ಲಿ ಕೂಡ ರಾತ್ರಿ ಸಮಯದಲ್ಲಿ ಆನೆಗಳು ಸಂಚರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿದ್ದಾರೆ