ಅಮ್ಮತ್ತಿ, ಮೇ ೨೮: ಅಮೃತ ಯುವ ಮೊಗೇರ ಸೇವಾ ಸಮಿತಿ ಇವರ ಸಹಭಾಗಿತ್ವದಲ್ಲಿ, ಶ್ರೀ ಕಲ್ಲುರ್ಟಿ ಮೊಗೇರ ಫುಟ್ಬಾಲ್ ಅಮ್ಮತ್ತಿ ವತಿಯಿಂದ ರಾಜ್ಯಮಟ್ಟದ “ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ - ೨೦೨೬” ಪಂದ್ಯಾವಳಿಯನ್ನು ತಾ. ೩೦ ಹಾಗೂ ೩೧ ರಂದು ಅಮ್ಮತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಮೊಗೇರ ಸಮುದಾಯದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿರುವ ಈ ರಾಜ್ಯಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ೮ ತಂಡಗಳು ಭಾಗವಹಿಸಲಿದ್ದು, ಕೊಡಗು ಸೇರಿದಂತೆ ಮಂಗಳೂರು, ಉಡುಪಿ, ಕಾಸರಗೋಡು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ರೂ. ೫೦,೦೦೦ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೩೦,೦೦೦ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳಿಗೆ ವಿಶೇಷ ಟ್ರೋಫಿಗಳನ್ನು ವಿತರಿಸಲಾಗುತ್ತದೆ. ಜೊತೆಗೆ ಉತ್ತಮ ಆಟಗಾರ, ಅತ್ಯುತ್ತಮ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್, ಉದಯೋನ್ಮುಖ ಆಟಗಾರ ಹಾಗೂ ಮ್ಯಾನ್ ಆಫ್ ದಿ ಸೀರಿಸ್ ಸೇರಿದಂತೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಆಯೋಜಕ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಸಮಾಜದ ಹಿರಿಯರು ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಮರಗೋಡು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೊಗೇರ ಸಮುದಾಯದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಆಯೋಜಕರಾದ, ಶಿವಪ್ಪ, ಮಂಜು ಬಬ್ಳಿ, ಶೇಷಪ್ಪ, ಹರೀಶ್, ಕೃಷ್ಣ, ರಾಮು, ಶಂಕರ್, ರಕ್ಷಿತ್, ಗಣೇಶ್ ತಿಳಿಸಿದ್ದಾರೆ.