ಕೂಡಿಗೆ, ಜೂ. ೧: ಕುಶಾಲನಗರ ತಾಲೂಕು ವ್ಯಾಪ್ತಿಯು ಆರೆ ಮಲೆನಾಡು ಪ್ರದೇಶವಾಗಿದ್ದು, ಈ ವ್ಯಾಪ್ತಿಯ ೯. ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೫. ಕ್ಕೂ , ಹೆಚ್ಚು ಉಪಗ್ರಾಮಗಳು ಮಳೆ ಆಶ್ರಯದ ಭೂಮಿಯನ್ನು ಹೊಂದಿದೆ, ಇದೀಗ ಬೇಸಿಗೆ ಕಾಲ ಮುಗಿಯುವ ಸಮಯವಾಗಿದೆ. ಈ ವ್ಯಾಪ್ತಿಯಲ್ಲಿ ಕಳೆದ ವಾರದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಭೂಮಿಯು ಹದವಾಗಿದ್ದು, ರೈತರು ಮುಂದಿನ ಸಾಲಿನ ಕೃಷಿ ಚಟುವಟಿಕೆಗೆ ಅನುಕೂಲ ವಾಗುವುದರಿಂದ ಟ್ರಾಕ್ಟರ್ ಮೂಲಕ ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಸೀಗೆಹೊಸೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಬಾಣವಾರ, ಅಳುವಾರ, ಹುದುಗೂರು, ಮದಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಗಳನ್ನು ಬೆಳೆಯಲು, ಮತ್ತು ಮುಂದಿನ ತಿಂಗಳುಗಳು ಮೆಕ್ಕೆಜೋಳ ಬೇಸಾಯಕ್ಕೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಮೊದಲ ಹಂತವಾಗಿ ಉಳುಮೆ ಮಾಡುವಲ್ಲಿ ಈ ಭಾಗದ ರೈತರು ಮುಂದಾಗಿರುತ್ತಾರೆ.

ಇದೀಗ ಉತ್ತಮವಾದ ಮಳೆಯು ಬಿದ್ದಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೆಳೆದಿರುವ ಶುಂಠಿ ಬೆಳೆಗೆ ಮತ್ತು ಸಿಹಿಗೆಣಸು ಬೆಳೆಗೆ ಅನುಕೂಲವಾಗಿದೆ. ಅದಕ್ಕೆ ಬೇಕಾಗುವ ರಸಗೊಬ್ಬರ, ಮತ್ತು ಮಣ್ಣು ಕಟ್ಟುವುದು, ಕಳೆತೆಗೆಯುವ ಕೆಲಸದಲ್ಲಿ ರೈತರು ತೊಡಗಿದ್ದಾರೆ.

ಅನೇಕ ಸಹಕಾರ ಸಂಘಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಈ ವ್ಯಾಪ್ತಿಯ ರೈತರ ಜಮೀನಿಗೆ ಅನುಕೂಲವಾಗುವಂತೆ ವಿವಿಧ ಕಂಪನಿಯ ರಸಗೊಬ್ಬರ ದಾಸ್ತಾನು, ಮತ್ತು ವಿವಿಧ ಕಂಪನಿಯ ಮೆಕ್ಕೆಜೋಳದ ದಾಸ್ತಾನು ಮಾಡುವ ಮೂಲಕ ರೈತರ ಬೇಸಾಯಕ್ಕೆ ವಿತರಣೆ ಮಾಡುವ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿರುವುದು ಕಂಡುಬರುತ್ತದೆ.