ಶ್ರೀಮಂಗಲ, ಜು. ೫: ಕೊಡವ ಭಾಷೆಯೇ ಚಂದದ ಭಾಷೆ. ಇದನ್ನು ಬೆಳೆಸಲು ನಮ್ಮಿಂದಾಗುವ ಪ್ರಯತ್ನ ಮಾಡುವುದರೊಂದಿಗೆ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಯುವಿಕೆಗೆ ಪಣತೊಡೋಣ ಎಂದು ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಕರೆ ನೀಡಿದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಕೂಟದ ೧೯೯ನೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇವರ ವರದಿಂದ ಪ್ರಪಂಚ ಖ್ಯಾತಿಯ ಸುಸಂಸ್ಕೃತ ಕೊಡವ ಜನಾಂಗದಲ್ಲಿ ಹುಟ್ಟಿರುವ ನಾವೇ ಧನ್ಯರು. ಈ ಜನ್ಮದ ಋಣ ತೀರಿಸಲು ಕೊಡವ ಭಾಷೆಯಲ್ಲೇ ಮಾತನಾಡೋಣ. ನಮಗೆ ದಾರಿದೀಪವಾಗಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಹಕಾರ ಪಡೆದುಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಕೊಡವ ಸಾಹಿತ್ಯ ಸೃಷ್ಠಿಸಲು ಪ್ರಯತ್ನಪಡೋಣ. ಕನಿಷ್ಟಪಕ್ಷ ಕೊಡವ ಪುಸ್ತಕ, ಪತ್ರಿಕೆಗಳನ್ನು ಓದಿ ಅದರಲ್ಲಿರುವ ಒಳ್ಳೆಯದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೊಣ. ಕೊಡವ ಪುಸ್ತಕ ಓದುವ ಮೂಲಕ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಪ್ರಯತ್ನ ಪಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಒಬ್ಬ ವ್ಯಕ್ತಿಯು ತನ್ನ ಹುಟ್ಟು, ಸಾವಿನ ಮಧ್ಯದ ಬದುಕಿನ ಅವಧಿಯಲ್ಲಿ ಸಮಾಜಮುಖಿ ಕೆಲಸ ಮಾಡಿ ಗುರುತಿಸಿಕೊಂಡರೆ ಮಾತ್ರ ಅವನ ಅಸ್ಥಿತ್ವಕ್ಕೆ ಬೆಲೆ ಸಿಗುತ್ತದೆ. ಅದರಲ್ಲೂ ಸಾಹಿತಿಗಳಿಗೆ ಹಾಗೂ ಅವರು ಸೃಷ್ಟಿಸಿದ ಸಾಹಿತ್ಯಕ್ಕೆ ಸಾವೇ ಇಲ್ಲ. ಹಿಂಜರಿಕೆ ಬಿಟ್ಟು ತಮ್ಮಲ್ಲಿರುವ ಪ್ರತಿಭೆಗೆ ಸಾಧ್ಯವಿರುವಷ್ಟರ ಮಟ್ಟಿಗೆ ಅಕ್ಷರ ರೂಪ ನೀಡಿದರೆ ಅದನ್ನು ತಿದ್ದಿತೀಡಿ ಪುಸ್ತಕ ರೂಪ ತರುವ ಜವಾಬ್ದಾರಿಯನ್ನು ಕೊಡವ ತಕ್ಕ್ ಎಳ್ತ್ಕಾರಡ ಕೂಟವು ವಹಿಸಿಕೊಳ್ಳುತ್ತದೆ. ಕೂಟ ಇದುವರೆಗೆ ೬೦ಕ್ಕೂ ಹೆಚ್ಚು ಯುವ ಪ್ರತಿಭೆಗಳನ್ನು ಉತ್ತಮ ಲೇಖಕರಾಗಿಸುವಲ್ಲಿ ಯಶಸ್ವಿಯಾಗಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೂಟ ಮುನ್ನಡೆಯುತ್ತಿದೆ. ಸದ್ಯದಲ್ಲೇ ೨೦೦ ಲೇಖಕರ ಲೇಖನವನ್ನೊಳಗೊಂಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ ೨೦೦ನೇ ಪುಸ್ತಕವನ್ನು ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಬಿಡುಗಡೆಯಾದ ಕೂಟದ ೧೯೯ನೆ ಹೆಜ್ಜೆಯ ನಂಬಿಕೆ ದ್ರೋಹ ಪುಸ್ತಕದ ಲೇಖಕಿ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ಮಾತನಾಡಿ, ಹಲವು ವರ್ಷಗಳಿಂದ ವಿವಿಧ ಪ್ರಾಕಾರದ ಸಾಹಿತ್ಯ ಬರೆಯುತ್ತಿದ್ದರೂ ಇದುವರೆಗೆ ಯಾವ ಲೇಖನವೂ ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇಂದು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಹಕಾರದಿಂದ ಚೊಚ್ಚಲ ಪುಸ್ತಕ ಲೋಕಾರ್ಪಣೆಯಾಗಿದೆ. ಇದೀಗ ಇನ್ನಷ್ಟು ಬರೆದು ಪ್ರಕಟಿಸುವ ಉತ್ಸಾಹ ಮೂಡಿದೆ ಎಂದರು.
ಪುಸ್ತಕ ದಾನಿ ನಾಯಕಂಡ ಮಧು ಬೋಪಯ್ಯ ಮಾತನಾಡಿ, ನಮ್ಮಿಂದ ಬರೆಯಲಾಗದಿದ್ದರೆ ಬರೆದವರ ಪುಸ್ತಕ ಪ್ರಕಟಿಸಲು ಆರ್ಥಿಕ ನೆರವು ನೀಡುವುದರೊಂದಿಗೆ ಸಾಹಿತ್ಯ ಬೆಳೆಸುವಲ್ಲಿ ಕೈಜೋಡಿಸಿದ ತೃಪ್ತಿ ಪಡೆಯಬಹುದು. ಸ್ವತಃ ಸಾಹಿತಿಯಾಗಿದ್ದು ಸ್ವರ್ಗವಾಸಿಯಾಗಿರುವ ತಾಯಿಯ ಸ್ಮರಣಾರ್ಥ ಈ ಪುಸ್ತಕ ಪ್ರಕಟಣೆಗೆ ಭಾಗಶಃ ಆರ್ಥಿಕ ನೆರವು ನೀಡಿದ ತೃಪ್ತಿ ಇದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಮುರುವಂಡ ಉಷಾ ಮೊಣ್ಣಪ್ಪ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ನಾಯಕಂಡ ಬೇಬಿ ಚಿಣ್ಣಪ್ಪ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ನುಡಿನಮನ ಅರ್ಪಿಸಲಾಯಿತು. ಈ ಸಂದರ್ಭ ಕೊಡವ ಹಾಡು, ಹಾಸ್ಯ ಹಾಗೂ ಕೊಡವ ಪುಸ್ತಕ ಓದುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪೊಮ್ಮಕ್ಕಡ ಕೂಟದ ಸಹ ಕಾರ್ಯದರ್ಶಿ ಮೂಕೋಂಡ ಪ್ರೀತ್ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಸ್ವಾಗತಿಸಿ, ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಲೇಖಕಿ ಹಾಗೂ ದಾನಿಯ ಪರಿಚಯ ಓದಿದರು. ಕೂಟದ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.
ಪ್ರಧಾನಿಗೆ ನಿಂದನೆ - ದೂರು ದಾಖಲು
*ಗೋಣಿಕೊಪ್ಪ, ಜು.೫ : ದೇಶದ ಪ್ರಧಾನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ ಗೋಣಿಕೊಪ್ಪ, ವೀರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು, ದೇಶದ ಪ್ರಧಾನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಎಸ್ಎನ್ಎಲ್ ಸಂಸ್ಥೆಯ ಮಾಜಿ ನೌಕರ ಪವಿತ್ರನ್ ವಿರುದ್ಧ ದೂರು ನೀಡಿದ್ದಾರೆ.
ಗೋಣಿಕೊಪ್ಪ ಠಾಣೆಯಲ್ಲಿ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಲನ್ ಗಣಪತಿ, ಅರುಣ್ ಭೀಮಯ್ಯ, ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಕಾರ್ಯದರ್ಶಿ ಕುಟ್ಟಂಡ ಅಜಿತ್, ಮುದ್ದಿಯಡ ಮಂಜು, ಪ್ರಮುಖರುಗಳಾದ ಸುಬ್ರಮಣಿ, ರಾಜೇಶ್ ಕೆ, ಬೋಜಮ್ಮ, ಕಾವ್ಯ ಮಧು, ಮಂಜು, ರಮೇಶ್ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.
ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಸಂದರ್ಭ ವೀರಾಜಪೇಟೆ ನಗರಾಧ್ಯಕ್ಷ ಅನಿಲ್ ಮಂದಣ್ಣ, ಸಚಿನ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್ ಶಿವಪ್ಪ, ಮನೋಜ್, ಪ್ರದೀಪ್, ಕಿರಣ್, ಸಂತೋಷ್ ಇದ್ದರು.