ಸಿದ್ದಾಪುರ, ಜು. ೧೮: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಉದ್ದೇಶದಿಂದ ಕುಶಾಲನಗರ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಫಲಗೊಂಡಿದ್ದು, ರೈತರ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ ಶಾಖೆಯ ಅಭ್ಯತ್ಮಂಗಲ, ಕಾಟಿಬಾಣೆ, ಅರೆಕಾಡು, ಅತ್ತಿಮಂಗಲ ಹಾಗೂ ನಲ್ವತ್ತೇಕರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಳೆದ ಎರಡು ದಿನಗಳಿಂದ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾವನ್ನು ಬಳಸಿಕೊಂಡು ಕಾಡಾನೆಗಳ ಚಲನವಲನವನ್ನು ಪತ್ತೆಹಚ್ಚಲಾಯಿತು. ಈ ವೇಳೆ ಎರಡು ಗುಂಪುಗಳಲ್ಲಿ ಸೇರಿ ೧೨ಕ್ಕೂ ಹೆಚ್ಚು ಕಾಡಾನೆಗಳು ಪತ್ತೆಯಾಗಿದ್ದವು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಒಂದು ಕಾಫಿ ತೋಟದಿಂದ ಮತ್ತೊಂದು ತೋಟಕ್ಕೆ ಸಂಚರಿಸುತ್ತಾ ಕಾಡಿನತ್ತ ತೆರಳದೆ ತೋಟಗಳಲ್ಲೇ ಉಳಿದುಕೊಂಡ ಕಾರಣ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಆರ್ಆರ್ಟಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾಡಾನೆಗಳು ಇನ್ನೂ ಕಾಫಿ ತೋಟಗಳಲ್ಲೇ ಬೀಡುಬಿಟ್ಟಿರುವುದರಿಂದ ರೈತರು ಹಾಗೂ ಕಾರ್ಮಿಕರು ಆತಂಕದಲ್ಲಿದ್ದು, ಪರಿಣಾಮಕಾರಿ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.