ಮಡಿಕೇರಿ, ಜು. ೨೧: ಭಾಗಮಂಡಲದಲ್ಲಿ ಹಿಂದಿನ ಶಾಸಕರ ಅವಧಿಗಿಂತ ಈಗಿನ ಶಾಸಕರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೂ ಉತ್ತಮವಾಗಿ ಕೆಲಸ ಮಾಡುತ್ತಿರುವ ಈಗಿನ ಶಾಸಕರ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಬಿಜೆಪಿ ನಿನ್ನೆ ದಿನ ಪ್ರತಿಭಟನೆ ನಡೆಸಿದೆ ಎಂದು ಭಾಗಮಂಡಲ ವಲಯ ಕಾಂಗ್ರೆಸ್ ಆರೋಪಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಳಿಬೈಲು ವೆಂಕಟೇಶ್ ಭಾಗಮಂಡಲದಲ್ಲಿ ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿದ್ದ ಮೇಲು ಸೇತುವೆ ಯೋಜನೆ ಎ.ಎಸ್.ಪೊನ್ನಣ್ಣ ಅವರು ಶಾಸಕರಾದ ನಂತರ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಭಾಗಮಂಡಲ ಸುತ್ತಮುತ್ತಲ ಗ್ರಾಮಗಳಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿವೆ, ತಡೆಗೋಡೆ ಮತ್ತು ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಂಡಿವೆ. ಬಿಜೆಪಿ ಪ್ರತಿಭಟನೆ ನಡೆಸಿದ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದುರಸ್ತಿಯ ಹಂತದಲ್ಲಿದೆ. ಇದೇ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿರುವುದು ಅರ್ಥಹೀನ ಎಂದರು.
ಭಾಗಮAಡಲ- ನಾಪೋಕ್ಲು ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಳೆಗಾಲದ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಅರ್ಚಕರಿಗಾಗಿ ವಸತಿ ಗೃಹಗಳು ನಿರ್ಮಾಣಗೊಳ್ಳಲಿದೆ, ವರ್ತಕರಿಗಾಗಿ ವ್ಯಾಪಾರ ಮಳಿಗೆಗಳ ನಿರ್ಮಾಣ ಕಾರ್ಯದ ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಶಾಸಕರು ಕೋಟ್ಯಾಂತರ ಅನುದಾನವನ್ನು ತಂದಿದ್ದಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಸುನಿಲ್ ಪತ್ರಾವೋ ಮಾತನಾಡಿ ಸುದೀರ್ಘ ಕಾಲ ಶಾಸಕರಾಗಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಮೂರು ವರ್ಷಗಳಲ್ಲಿ ಎ.ಎಸ್.ಪೊನ್ನಣ್ಣ ಅವರು ಮಾಡಿದ್ದಾರೆ. ತ್ರಿವೇಣಿ ಸಂಗಮಕ್ಕೆ ರಾಜಕಳೆಯನ್ನು ತಂದು ಕೊಟ್ಟಿದ್ದಾರೆ. ಆದರೂ ಅಭಿವೃದ್ಧಿಯ ವಿರೋಧಿಗಳು ಭಾಗಮಂಡಲದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೌರೀಶ್ ರೈ ಹಾಗೂ ನಾಪೋಕ್ಲು ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೋಡಿ ಉಪಸ್ಥಿತರಿದ್ದರು.