ಸುAಟಿಕೊಪ್ಪ, ಜು. ೨೩: ಮುಂದಿನ ಭವಿಷ್ಯದ ಬಳಕೆಗಾಗಿ ನೀರನ್ನು ಉಳಿಸುವ ಅಭ್ಯಾಸವನ್ನು ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ. ಈ ದಿಸೆಯಲ್ಲಿ ನಾವು ವೈಜ್ಞಾನಿಕ ಕ್ರಮದಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಮತ್ತು ಪಾವನಿ ಇಕೋ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ: ೨೦೨೬ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಉತ್ತಮ ಭವಿಷ್ಯಕ್ಕಾಗಿ ಜಲ ಸಂರಕ್ಷಣೆ ವಿಷಯದ ಕುರಿತು ಅವರು ಮಾತನಾಡಿದರು. ನೀರು ಅಮೂಲ್ಯವಾಗಿದ್ದು, ಉಳಿಸಿ ಬಳಸುವುದು ಅತೀ ಮುಖ್ಯ. ನೀರಿನ ಮಿತ ಬಳಕೆಯಿಂದ ಮಾನವನ ಉಳಿವು ಸಾಧ್ಯ. ನೀರಿನ ಮಿತಬಳಕೆ ಮತ್ತು ಮರು ಬಳಕೆಯಲ್ಲಿ ಎಲ್ಲರೂ ಪಾಲ್ಗೊಂಡು ನಾಳೆಯ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಲು ಸಂಕಲ್ಪ ಮಾಡಬೇಕು ಎಂದು ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸೋಮಯ್ಯ ಮಾತನಾಡಿ,ನೀರನ್ನು ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ನೀರನ್ನು ಸರಂಕ್ಷಿಸಲು ಪಣ ತೊಡಬೇಕು ಎಂದರು.
ಜಲ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದ ಟಿ.ಜಿ.ಪ್ರೇಮಕುಮಾರ್, ನೀರಿನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಮಡಿಕೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಎನ್.ಪಿ.ನವೀನ್, ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಂ.ರಮೇಶ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಎಚ್.ಪಿ. ಸೈದಾಲವಿ, ಪಾವನಿ ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಡಿ.ಯು.ಬಿಂದುಕುಮಾರಿ, ಶಿಕ್ಷಕರಾದ ಕೆ.ಬಿ.ರಾಧಾಕೃಷ್ಣ, ಪಿ.ಎಚ್.ರಜಿಯಾ, ಆರ್.ಯಶೋರಾಣಿ, ಕೆ.ಎಚ್. ಗಾಯಿತ್ರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ದೇಲಂಪಾಡಿ ಎಂ.ಚಿನ್ನಪ್ಪ, ಅತಿಥಿ ಶಿಕ್ಷಕರಾದ ಪಿ.ಆರ್. ವಿಮಲಾ, ಎನ್.ಪಿ. ವಾಣಿಶ್ರೀ ಇದ್ದರು.
ವಿದ್ಯಾರ್ಥಿಗಳು ನೆಲ, ಜಲ, ಪರಿಸರ, ಜೀವ ವೈವಿಧ್ಯ ಹಾಗೂ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡುವ ಫಲಕಗಳು ಹಾಗೂ ಘೋಷ ವಾಕ್ಯದೊಂದಿಗೆ ಜಾಗೃತಿ ಮೂಡಿಸಿದರು.