ಚನ್ನನಾಯಕ
ಪೊನ್ನಂಪೇಟೆ, ಜು. ೨೮: ಕೃಷಿ ಕಾರ್ಮಿಕರ ಕೊರತೆ ಮತ್ತು ಹೆಚ್ಚುತ್ತಿರುವ ಖರ್ಚಿನಿಂದ ಗದ್ದೆಗಳನ್ನು ಪಾಳು ಬಿಡುವ ಬದಲು, ಭತ್ತದ ಬೀಜವನ್ನು ನೇರವಾಗಿ ಗದ್ದೆಗೆ ಚೆಲ್ಲುವ ವಿಧಾನದ ಮೂಲಕ ಭತ್ತದ ಕೃಷಿಯನ್ನು ಮುಂದುವರೆಸಲು ಅವಕಾಶ ಇದೆ. ವಿಶೇಷವಾಗಿ ಮಳೆ ಕಡಿಮೆ ಇರುವ ಸಂದರ್ಭದಲ್ಲಿ ಈ ವಿಧಾನ ರೈತರಿಗೆ ವರದಾನವಾಗಲಿದೆ. ಸಾಂಪ್ರದಾಯಿಕ ನಾಟಿಗೆ ಸಾಕಷ್ಟು ಕಾರ್ಮಿಕರು, ಸಮಯ ಮತ್ತು ಹಣ ಬೇಕಾಗುತ್ತದೆ. ಆದರೆ ಭತ್ತವನ್ನು ಚೆಲ್ಲುವ ವಿಧಾನದಲ್ಲಿ, ಗದ್ದೆ ಸಿದ್ಧಪಡಿಸಿ ನೇರವಾಗಿ ಬೀಜ ಚೆಲ್ಲುವುದರಿಂದ ಹೆಚ್ಚು ಖರ್ಚು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಕಾರ್ಮಿಕರ ಮೇಲಿನ ಅವಲಂಬನೆ ಕೂಡ ಕಡಿಮೆಯಾಗುತ್ತದೆ. ಟ್ರಾö್ಯಕ್ಟರ್ನಲ್ಲಿ ಉಳುಮೆ ಮಾಡಿ, ಗದ್ದೆಯನ್ನು ಹದಗೊಳಿಸಿ, ನೇರವಾಗಿ ಬೀಜ ಚೆಲ್ಲಿದರೆ ಕೆಲಸ ಮುಗಿಯುತ್ತದೆ. ಪೈರು ಬಂದ ಮೇಲೆ ಕಳೆ ನಾಶಕ ಸಿಂಪಡಿಸಿದರೆ ಸಾಕು.
ಈ ವಿಧಾನದ ಪ್ರಮುಖ ಲಾಭಗಳು
ಕಾರ್ಮಿಕರ ಕೊರತೆ ನೀಗುತ್ತದೆ. ಮಳೆ ಬಂದ ಕೂಡಲೇ ಬಿತ್ತನೆ ಮಾಡಬಹುದು. ೧೦ ಜನರ ಕೆಲಸವನ್ನು ಇಬ್ಬರು ಮಾಡಬಹುದು. ಖರ್ಚು ಕಡಿಮೆ, ಸಮಯ ಉಳಿತಾಯ. ಖರ್ಚು ಕಡಿಮೆಯಾಗಿ ರೈತರ ಕೈಗೆ ಹೆಚ್ಚಿನ ಲಾಭ. ಪಾಳು ಗದ್ದೆಗಳಿಗೆ ಜೀವ ನೀಡಬಹುದು. ಕಡಿಮೆ ಗದ್ದೆ ಹೊಂದಿರುವ ರೈತರು ಕೂಡ ತಮ್ಮ ಗದ್ದೆಯನ್ನು ಪಾಳು ಬಿಡದೆ ಪ್ರತಿ ವರ್ಷ ಬಿತ್ತನೆ ಮಾಡಬಹುದು. ಇದರಿಂದ ಕೃಷಿ ನಿಲ್ಲುವುದಿಲ್ಲ.
ಪರಿಸರಕ್ಕೂ ಲಾಭ
ಗದ್ದೆಗಳು ಅಂತರ್ಜಲ ಹೆಚ್ಚಿಸುವ ನೈಸರ್ಗಿಕ ಕಣಜಗಳಾಗಿವೆ. ರೈತರು ಈ ಸುಲಭ ವಿಧಾನದಿಂದ ಗದ್ದೆಗಳನ್ನು ಪಾಳು ಬಿಡದೆ ಕೃಷಿ ಮಾಡಿದರೆ, ಒಂದು ಕಡೆ ಆಹಾರ ಉತ್ಪಾದನೆ ಹೆಚ್ಚುವುದರ ಜೊತೆಗೆ ಇನ್ನೊಂದು ಕಡೆ ಅಂತರ್ಜಲ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಗೂ ಸಹಾಯವಾಗುತ್ತದೆ. ಈಗಾಗಲೇ ಕೊಡಗಿನಲ್ಲಿ ಹಲವು ರೈತರು ಭತ್ತ ಚೆಲ್ಲುವ ವಿಧಾನವನ್ನು ಅನುಸರಿಸಿ ಕೃಷಿ ಮುಂದುವರೆಸಿದ್ದಾರೆ. ಕಷ್ಟದ ನಡುವೆಯೂ ಕೃಷಿ ಬಿಡದೆ ಹೊಸ ವಿಧಾನ ಅಳವಡಿಸಿಕೊಳ್ಳುವ ರೈತರ ಪ್ರಯತ್ನ ಕೊಡಗಿನ ಕೃಷಿಗೆ ಮಾದರಿಯಾಗಿದೆ.