ಚೆಯ್ಯಂಡಾಣೆ, ಆ. ೧: ಪರಿಸರ ಸ್ವಚ್ಛತೆಯ ಪರಿಪಾಠವು ಮನೆಗಳಿಂದಲೇ ಆರಂಭವಾಗಬೇಕು. ಮನೆಗಳಿಂದ ಜಾಗೃತಿ ಆರಂಭವಾದರೆ ಪರಿಸರ ಸಂರಕ್ಷಣೆ ಸಾಧ್ಯ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು.
ವೀರಾಜಪೇಟೆ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ, ವೀರಾಜಪೇಟೆ ಪತ್ರಕರ್ತರ ವೇದಿಕೆ, ನ್ಯೂಸ್ ೩ ಡಿಜಿಟಲ್ ಮೀಡಿಯಾ ಹಾಗೂ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ, ಯುವ ರೆಡ್ಕ್ರಾಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಮನೆಯನ್ನು ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿದಾಗ ಸಮಾಜದಲ್ಲಿಯೂ ಸ್ವಚ್ಛ ಪರಿಸರದ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿ, ಗಿಡಗಳನ್ನು ನೆಟ್ಟು ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ. ಮರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಡಲು ಮನಸನ್ನು ಮಾಡಿದರೆ ಪರಿಸರ ಸ್ವಚ್ಛವಾಗಿರುತ್ತದೆ. ಆ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಮದಲೈಮುತ್ತು ಮಾತನಾಡಿ, ನಾವು ಭೂಮಿಯನ್ನು ರಕ್ಷಿಸಿದರೆ ಭೂತಾಯಿ ನಮ್ಮನ್ನು ರಕ್ಷಿಸುತ್ತಾಳೆ. ಭೂಮಿ ಹಾಗೂ ಪರಿಸರವು ಕಲುಷಿತವಾಗದ ಹಾಗೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲೆ ಇದೆ. ವನಮಹೋತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
ವೀರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮಾತನಾಡಿ, ವೀರಾಜಪೇಟೆ ನಗರದಾದ್ಯಂತ ಸ್ವಚ್ಛತೆ ಕುರಿತು ಜಾಗೃತಿಯನ್ನು ಮೂಡಿಸಲು ಹಲವಾರು ಕ್ರಮಗಳನ್ನು ಪುರಸಭೆಯು ಕೈಗೊಂಡಿದೆ. ಕಂಡಕAಡಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಎಸೆಯುವುದನ್ನು ಜನರು ನಿಲ್ಲಿಸಬೇಕು. ಇಂದು ವಿವಿಧ ಘಟಕಗಳ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಪರಿಸರ ಸ್ವಚ್ಛತೆಯ ಕುರಿತು ಜಾಗೃತಿ ಅಗತ್ಯ ಎಂದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಯುವ ರೆಡ್ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೆಸ್, ನ್ಯೂಸ್ ೩ ಡಿಜಿಟಲ್ ಮೀಡಿಯಾದ ಸಂಪಾದಕ ಶಶಿ ಅಚ್ಚಪ್ಪ, ಆಪ್ತಬ್, ಮಹಮದ್ ನಯಾಜ್, ಮಾಚಯ್ಯ ಸುಬ್ರಮಣಿ, ಮಂಜುನಾಥ್, ತಾಲೂಕು ಕಚೇರಿಯ ಅಧಿಕಾರಿಗಳು ಹಾಗೂ ಸರ್ವ ಸಿಬ್ಬಂದಿಗಳು, ಎನ್ಎಸ್ಎಸ್ ಘಟಕದ ಸ್ವಯಂ ಸೇವಾ ವಿದ್ಯಾರ್ಥಿಗಳು, ಪುರಸಭೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಕಚೇರಿಯ ಆವರಣದಲ್ಲಿ ಸೀಬೆ, ಹಿಪ್ಪೆ, ನೇರಳೆ, ಲಿಂಬೆ ಹಾಗೂ ಬಟರ್ಫ್ರೂಟ್ ಮೊದಲಾದ ಐವತ್ತಕ್ಕೂ ಅಧಿಕ ವಿವಿಧ ಹಣ್ಣಿನ ಗಿಡಗಳನ್ನು ಈ ಸಂದರ್ಭ ನೆಡಲಾಯಿತು.