ಗೋಣಿಕೊಪ್ಪಲು, ಆ. ೩: ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತನನ್ನು ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ಸುಬ್ರಮಣಿ ಅಲಿಯಾಸ್ ಚುಬ್ರ (೩೫) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈಗಾಗಲೇ ೧೩ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು, ಒಂದು ಕೊಲೆ ಪ್ರಕರಣ ಹಾಗೂ ಹಲವು ದೇವಾಲಯಗಳ ಹುಂಡಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಮತ್ತೆ ಕಳ್ಳತನ ಕೃತ್ಯಗಳಲ್ಲಿ ತೊಡಗುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಟಿ ಮನೆಯಲ್ಲಿ ಕಳ್ಳತನ ನಡೆಸಿದ ಪ್ರಕರಣ ಹಾಗೂ ಹಾತೂರು-ಬೈಗೋಡು ಮಹಾದೇವರ ದೇವಾಲಯದ ಕಳ್ಳತನ ಪ್ರಕರಣದ ತನಿಖೆ ವೇಳೆ ಆರೋಪಿ ಪತ್ತೆಯಾಗಿದ್ದು, ಮೈಸೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಾಯಮುಡಿಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಿಂಬಾಗಿಲನ್ನು ಕಬ್ಬಿಣದ ಸಲಾಖೆಯಿಂದ ಮುರಿದು ಒಳನುಗ್ಗಿದ ಆರೋಪಿ, ಚಿನ್ನದ ಸರ ಹಾಗೂ ನಗದನ್ನು ದೋಚಿ ಕಾಫಿ ತೋಟದ ಮೂಲಕ ತಿತಿಮತಿಗೆ ನಡೆದುಕೊಂಡು ಬಂದು, ಅಲ್ಲಿಂದ ಬಸ್ ಮೂಲಕ ಮೈಸೂರಿಗೆ ತೆರಳಿದ್ದಾನೆ. ಕಳ್ಳತನದಿಂದ ಪಡೆದ ಹಣದಲ್ಲಿ ಮದ್ಯಪಾನ ಮಾಡಿ ಕೆಲವು ದಿನ ಮೈಸೂರಿನಲ್ಲಿ ಕಳೆದಿದ್ದಾನೆ. ಹಣ ಖಾಲಿಯಾದ ಬಳಿಕ ಮತ್ತೆ ಕೊಡಗಿಗೆ ಮರಳಲು ಮೈಸೂರಿನ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸದಾ ಬ್ಯಾಗಿನಲ್ಲಿ ಕತ್ತಿ ಹಾಗೂ ಕಬ್ಬಿಣದ ಸಲಾಖೆ ಇಟ್ಟುಕೊಂಡೇ ಸಂಚರಿಸುತ್ತಿದ್ದ ಎನ್ನಲಾಗಿದೆ. ಶ್ರೀಮಂಗಲ, ಸಿದ್ದಾಪುರ, ವೀರಾಜಪೇಟೆ, ಪೊನ್ನಂಪೇಟೆ ಹಾಗೂ ಸುಂಟಿಕೊಪ್ಪ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನದಿಂದ ದೊರೆಯುವ ಹಣವನ್ನು ಸ್ನೇಹಿತರೊಂದಿಗೆ ಮದ್ಯಪಾನಕ್ಕೆ ಖರ್ಚು ಮಾಡುತ್ತಿದ್ದ ಆತ, ರಾತ್ರಿ ವೇಳೆ ಸರ್ಕಾರಿ ಶಾಲೆಗಳಲ್ಲಿ ತಂಗಿ, ಬೆಳಿಗ್ಗೆ ಮತ್ತೆ ಕಳ್ಳತನಕ್ಕೆ ಮುಂದಾಗುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅವರ ಮಾರ್ಗದರ್ಶನದಲ್ಲಿ, ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ ನೇತೃತ್ವದಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳಾದ ಗಿರೀಶ್, ಮಹೇಶ್ ಸೇರಿದಂತೆ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
-ಹೆಚ್.ಕೆ. ಜಗದೀಶ್